ಯಾರನ್ನೂ ಬಿಟ್ಟವಳಲ್ಲಾ ಪಟೇಲ್ರೆ…

ಚಪ್ಪಲಿಯೆಂಬ ಸ್ಲಿಪ್ಪರು ಕಾಲಿನ ಹಿಮ್ಮಡಿಯಿಡುವ ಜಾಗದಲ್ಲಿ ಪೂರ್ಣ ಕರಗಿ ಮುಕ್ರಿರಾಮನ ಕಾಲು ನೆಲ ಕಚ್ಚುತ್ತಿತ್ತು. ಹಿಂಬದಿಯಿಂದ ಆ ಸ್ಲಿಪ್ಪರನ್ನು ನೋಡಿದರೆ ಹಾವಿನ ಸೀಳು ನಾಲಿಗೆ ನೆನಪಾಗುತ್ತಿತ್ತು. ನಡೆಯುವಾಗ ಯಾರಾದರು ಜೊತೆಯಲ್ಲಿ ಸಿಕ್ಕರೆ ಅವರೊಟ್ಟಿಗೆ ಮಾತಾಡುತ್ತಿದ್ದ – ಇಲ್ಲದಿದ್ದರೆ ತನ್ನಷ್ಟಕ್ಕೆ ತಾನೇ ಮಾತಾಡಿಕೊಂಡು ದಾರಿ ಸಾಗಿಸುತ್ತಿದ್ದ. ರಾಮ ಒಬ್ಬನೆ ನಡೆದು ಹೊಗುವಾಗ ಬೆನ್ನಿಗೆ ಕಟ್ಟಿಕೊಂಡ ಕೊಕ್ಕೆ ಮತ್ತು ಅದಕ್ಕೆ ಸಿಕ್ಕಿಸಿಕೊಂಡ ಕತ್ತಿ ಎರಡು ಸೇರಿ ಮಾಡುತ್ತಿದ್ದ ಶಬ್ಧ ರಾಮನ ಸ್ವಗತದ ಮಾತಿನೊಂದಿಗೆ ಸೇರಿ ಅವನು ನಡೆದು ಬರುತ್ತಿದ್ದರೆ ಸಣ್ಣಗೆ ತಾಳ ಬಡಿದುಕೊಂಡು ದೇವರ ಭಜನೆ ಮಾಡುತ್ತ ಬರುತ್ತಿದ್ದಂತೆ ಹಲವರಿಗೆ ಅನ್ನಿಸಿ ಅವನ ಅಖಂಡ ಭಜನೆ- ದೇವರ ಸ್ಮರಣೆಯ ಸುತ್ತ ಕಥೆ ಬೆಳೆದುಕೊಂಡಿತ್ತು. ಪ್ರತೀ ಹೆಜ್ಜೆ ಕಿತ್ತು ಇಟ್ಟಾಗ ಬಲಗಾಲಿನ ಅದ್ಯಾವುದೋ ಜಾಯಿಂಟಿನಿಂದ ಹೊರಬರುವ ಕಟ್ ಎಂಬ ಶಬ್ಧಕ್ಕೆ ಒಂದು ಲಯವಿತ್ತು. ಕಾಲಿನಲ್ಲಿ ಅಲ್ಲಲ್ಲಿ ಚರ್ಮದ ಕೆಲ ಭಾಗಗಳಲ್ಲಿ ಪೈಂಟು ಹೋದಂತೆ ಕಾಣಿಸುತ್ತಿದ್ದ ತೊನ್ನಿನ ಚರ್ಮದ ಸುತ್ತ ತುರಿಕೆಯಿಂದ ಕೆರ್‍ಎದ ಕುರುಹುಗಳಿತ್ತು. ರಾಮನನ್ನು ನೋಡಿದರೆ ಒಟ್ಟಾರೆಯಾಗಿ ಒಂದು ಓಡಾಡುವ ; ಅವನತಿಯ ಅಂಚಿನಲ್ಲಿರುವ ಸಂಸ್ಕೃತಿಯಂತೆ ಭಾಸವಾಗುತ್ತಿತ್ತು.

ಅಂಗಳದ ಅಂಚಿನಿಂದ ದಾಸವಾಳ ಗಿಡಗಳ ಮಧ್ಯದಲ್ಲಿ ಅನತಿ ದೂರದಲ್ಲಿ ಬೆಳ್ಳಾರೆ ಶಿಖರ ಮಳೆಗೆ ಒದ್ದೆಯಾಗಿ ಮಿಂದು ನಿಂತಿದ್ದನ್ನು ಪಟೇಲರು ತದೇಕಚಿತ್ತದಿಂದ ನೋಡುತ್ತ ತಮ್ಮ ಅಧ್ಯಾತ್ಮ ಚಿಂತನೆಯಲ್ಲಿ ಮಗ್ನರಾಗಿದ್ದರು. ಬೆಳ್ಳಾರೆ ಶಿಖರದ ನೀರೆಲ್ಲ ಕೆಳಗೆ ಇಳಿದು ಉಳ್ಳಂತಿ ಜಲಪಾತಕ್ಕೆ ಹರಿದು – ಜಲಪಾತ ಜಾಸ್ತಿಯೇ ಶಬ್ಧಮಾಡುತ್ತಿತ್ತು. ಜಲಪಾತದ ಬೊರ್ಗರೆತದ ತೀವ್ರತೆಯಿಂದುಂಟಾದ ಶಬ್ಧ ಅನತಿ ದೂರದ ಪಟೇಲರ ಮನೆಯ ಹೊರಜಗುಲಿ ತಲುಪಿ ಪಟೇಲರ ಮೌನದಲ್ಲಿ ಲೀನವಾಗುತ್ತಿತ್ತು. ಪಟೇಲರ ಮೌನ – ಉಳ್ಳಂತಿಯ ಬೋರ್ಗರೆತ ಇವೆರಡೂ ಪ್ರತೀ ವರುಷ ಎಲ್ಲ ಹಬ್ಬದಂತೆ ಮರುಕಳಿಸುತ್ತಿದ್ದವು. ಮೌನ ಮತ್ತು ಬೋರ್ಗರೆತ ಪಟೇಲರನ್ನು ಒಂದು ಅಖಂಡ ಧ್ಯಾನದತ್ತ ಕೊಂಡೊಯ್ಯುತ್ತಿತ್ತು. ಧ್ಯಾನದಲ್ಲಿ ಹುಟ್ಟುವ ಪ್ರತಿಯೊಂದು ಪ್ರಶ್ನೆಗೆ ಪಟೇಲರು ಉತ್ತರಿಸುತ್ತಿದ್ದರೆ ಅದು ಕೊನೆಯಲ್ಲಿ ಬಾಲ್ಯದಲ್ಲಿ ಕಂಡ ಉಳ್ಳಂತಿಯತ್ತ ಕೊಂಡೊಯ್ಯುತಿತ್ತು. ಅದೊಂದು ದಿನ ಶಾಲೆ ಮುಗಿಸಿಬರುತ್ತಿದ್ದಾಗ ಉಳ್ಳಂತಿಯ ಧಾರೆಯ ಮಧ್ಯದಲ್ಲಿ ಮಂಗವೊಂದು ಜೀವನ್ಮರಣದ ಮಧ್ಯದಲ್ಲಿ ಹೋರಾಡುತ್ತಿದ್ದ ದೃಷ್ಯ – ಪುಟ್ಟಣ್ಣಯ್ಯ ಮರಿಪಟೇಲರನ್ನು ಎಳೆದು ಮನೆಗೆ ಸೇರಿಸಿದ್ದು – ಆಗ ತನ್ನಲ್ಲುಂಟಾದ ತುಮುಲ – ಆತಂಕ. ಆಮೇಲೆ ಆ ಮಂಗ ಅದೇನಯಿತೋ ಎಂಬ ಪ್ರಶ್ನೆ ಹಲವು ವರ್ಷಗಳವರೆಗೆ ಕಾಡಿದ್ದು – ಇನ್ನೂ ಕಾಡುತ್ತಿರುವುದು; ಮಧ್ಯದಲ್ಲಿಪಟೇಲರ ಕಣ್ಣು ಅದೇಕೋ ಒದ್ದೆಯಾಯಿತು. ಹೀಗೊಂದು ಅಖಂಡಮೌನದಿಂದ ಈಚೆ ಬರಲು ಪಟೇಲರಿಗೆ ಮನಸ್ಸೇ ಆಗಲಿಲ್ಲ. ಜೀವನದಲ್ಲಿ ಕಂಡ ನೋವು – ಇನ್ನೊಬ್ಬರ ನೋವು ತನ್ನದೇ ಎಂದೆನಿಸಿ ಅನುಭವಿಸಿದ ಸಾರ್ಥಕತೆ ಇವೆಲ್ಲಾ ಪಟೇಲರ ಮೌನ ಮತ್ತು ಜಲಪಾತದ ಮಾರ್ದನಿಯಿಂದ ಬೇರ್ಪಡಿಸಲು ಅದ್ಯಾವಶಕ್ತಿಗೂ ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಇದಕ್ಕೆಲ್ಲ ತಾನೇ ಸಾಕ್ಷಿ ಎಂದಂತೆ ಉಳ್ಲಂತಿಯನ್ನು ತನ್ನೊಡಲಲ್ಲೇ ಹುಟ್ಟಿಸಿ ಬೆಳೆಸಿದ ಬೆಳ್ಳಾರೆ ಪರ್ವತ ಅದ್ಯವುದಕ್ಕೂ ಕರಗದೇ ಹಾಗೆಯೆ ನಿಂತಿತ್ತು ಪರ್ವತದಂತೆ. ಪಟೇಲರಿಗೂ ಅಷ್ಟೇ , ಪರ್ವತದ ಬಗ್ಗೆ ವಿಶೇಷ ಆಸ್ಥೆ. ಅಂಗಳದ ತುದಿಯಲ್ಲಿ ಅದ್ಯಾವುದೇ ಹೂವಿನಗಿಡ ಬೆಳೆದು ಬೆಳ್ಳಾರೆಯನ್ನು ಕಣ್ನೂಟದಿಂದ ಮರೆ ಮಾಡಲು ಪ್ರಯತ್ನಿಸಿದರೂ ಅದನ್ನು ಅಷ್ಟಕ್ಕೇ ಕಡಿಸಿಬಿಡುತ್ತಿದ್ದರು. ಬೆಳ್ಳಾರೆ ಪರ್ವತ ಅವರಿಗೆ ಸಮಾಧಾನ ಹೇಳಿತ್ತು – ನೆಮ್ಮದಿಯ ಜೀವನಪಾಠ ಕಲಿಸಿತ್ತು, ತನ್ನ ದುಖ: ಸುಖಗಳನ್ನು ಹೇಳುವಾಗ ಯಾವುದೇ ಅಸಡ್ಡೆಯಿಲ್ಲದೇ ಕೇಳಿಸಿಕೊಂಡಿತ್ತು – ಹೀಗೆ ಬೆಳ್ಳಾರೆ ಕೇವಲ ಒಂದು ಪರ್ವತವಾಗಿರದೇ ಅದೊಂದು ವ್ಯಕ್ತಿಯಾಗಿ ಪಟೇಲರ ಜೀವನದ ಭಾಗವೇ ಆಗಿತ್ತು.

ಮಳೆಗಾಲ ಬಂದರೆ ಅಡಿಕೆಮರಗಳಿಗೆಲ್ಲ ಔಷದ ಹಾಕಿಸಿ ಕೂತರೆ ಮತ್ತೆ ತೋಟದಕೆಲಸ ಸ್ವಲ್ಪ ಕಡಿಮೆಯೇ. ಮಧ್ಯದಲ್ಲಿ ಕಳೆ ಕೀಳಿಸಿದರೆ ಮಳೆಗಾಲ ಬಿಡುವಿನ ಕಾಲ. ಹೀಗಾಗಿ ಪಟೇಲರಿಗೆ ತಮ್ಮ ಲಹರಿಯಲ್ಲಿ ಮುಳುಗಲು ತುಸು ಸಮಯಕ್ಕೆ ಮಳೆಗಾಲವೇ ಬರಬೇಕಾಗಿತ್ತು. ಒಟ್ಟಾರೆಯಾಗಿ ಮೌನವನ್ನು ಬಿಡಲೇಬಾರದೆಂದು ಜಗುಲಿಯ ಅಂಚಿನಲ್ಲಿ ಕೂತ ಪಟೇಲರಿಗೆ ಅಂಗಳದ ಎದುರಿನ ಇಳಿಜಾರಿನ ಮೆಟ್ಟಿಲಿಂದ ಸೂರ್ಯೋದಯದಂತೆ ಮುಕ್ರಿರಾಮನ ಮುಂಡಾಸ ಮೂಡಿಬಂದದ್ದು ಕಂಡು ಕ್ಷಣಾರ್ಧದಲ್ಲಿ ಏನು ಮಾಡಬೇಕೆಂಬುದು ಗೊತ್ತಾಗದೇ ಸರಕ್ಕನೆ ಎದ್ದು ಒಳಮನೆಯತ್ತ ಓಡಿದರು. ಓಡುವಾಗ ಹೆಂಡತಿಯ ಹತ್ತಿರ “ಮುಕ್ರಿರಾಮನ ಭಜನೆ ಬರ್ತಾ ಇದೆ- ನನ್ನನ್ನ ಕೇಳಿದ್ರೆ ಇಲ್ಲಾ ಅಂತಾ ಹೇಳೇ” ಎಂದು ಒಳಮನೆ ಸೇರಿಕೊಂಡರು. ಮುಕ್ರಿರಾಮ ಇವರಿಗೇನಾದರೂ ಸಾಲಕೊಟ್ಟು ಅದನ್ನು ವಾಪಸ್ಸು ಪಡೆಯಲು ಬರುತ್ತಿದ್ದಾನೆಯೇ ಎಂಬಂತೆ ಓಡಿದ ಪಟೆಲರನ್ನು ನೋಡಿ ಸಣ್ಣಗೆ ನಕ್ಕು ಪಟೇಲತಿ ಹೊರಬಂದರು.

“ಪಟೆಲ್ರು ಇಲ್ಲವ್ರಾ?” . ಒಳಮನೆಯ ಕತ್ತಲಿಂದ ಹೊರಬಂದ ಪಟೆಲವ್ವನಿಗೆ ಮುಕ್ರಿರಾಮನ ಮುಖದ ಅಗಾಧ ವ್ಯಾಕುಲತೆ ಮತ್ತು ಧಿಗಿಲು ಗ್ರಹಿಸಲಾಗಲಿಲ್ಲ. “ಆಸರಿಗೆ ಯೇನದ್ರು ಬೇಕಾ ನಿಂಗೆ ಕುಡೀಲಿಕ್ಕೆ” ಪಟೆಲವ್ವನ ಅದ್ಯವುದೇ ಉಪಚಾರವನ್ನು ಕೇಳುವ ವ್ಯವಧಾನವಿಲ್ಲದೇ ಮತ್ತೆ “ಪಟೇಲ್ರು ಯೆಲ್ಲವ್ರೆ ?” ಎಂದು ಪಟೇಲವ್ವನ ಮುಖವೆತ್ತಿ ನೋಡಿದ ಮುಕ್ರಿರಾಮನ ಮುಖದಲ್ಲಿ ಸಿಡಿಲುಬಡಿದ ಭಾವ. ಮಳೆಯೆಂದು ಹೊದ್ದ ಕಂಬಳಿ – ಮಳೆ ನೀರು ಕುಡಿದು ಕಂಬಳಿ ಭಾರವಾಗದಿರಲಿ ಎಂದು ಮೇಲೆ ಹಾಕಿಕೊಂಡ ನೀಲಿ ಬಣ್ಣದ ಪ್ಲಾಸ್ಟಿಕ್ ಕೊಪ್ಪೆ ; ಈ ಕೊಪ್ಪೆಯನ್ನು ಮಳೆಯೊಟ್ಟಿಗೆ ಬಂದ ಗಾಳಿ ಮೇಲಕ್ಕೆ ಹಾರಿಸಿ ಮುಕ್ರಿರಾಮನ ಹಿಂಬದಿಯ ಕಚ್ಚೆಯನ್ನೆಲ್ಲಾ ಒದ್ದೆ ಒದ್ದೆ ಮಾಡಿತ್ತು. ಕಚ್ಚೆ ಚರ್ಮಕ್ಕೆ ಅಂಟಿಕೊಂಡಿತ್ತು – ಪಿಚ್ಚರಿನ ಹೀರೊಯಿನ್ನಿನ ಬಟ್ಟೆಯಂತೆ. ಕಾಲಿನ- ಹಾವಿನ ನಾಲಿಗೆಯಂಥಾ ಸೀಳು ಚಪ್ಪಲಿ ರಸ್ತೆಯ ರಾಡಿಯನ್ನೆಲ್ಲಾ ಮೇಲಕ್ಕೆ ಹಾರಿಸಿ ಕಚ್ಚೆಯೆಲ್ಲಾ ಕೆಂಪನೆಯ ಹುಂಡು ಹುಂಡು ಮಚ್ಚೆ ಹಾಕಿಸಿಕೊಂಡಿತ್ತು – ಗೋಡೆಗೆ ಪೈಂಟು ಮಾಡುವಾಗ ಕೆಳಗೆ ನೆಲಕ್ಕೆ ಹಾಸಿದ ಬಟ್ಟೆಯನ್ನೇ ಕಚ್ಚೆಯನ್ನಾಗಿಸಿದಂತೆ ಕಾಣಿಸುತ್ತಿತ್ತು. ಕಾಲ್ಬೆರಳ ಸಂದಿಯಲ್ಲಿ ಮಳೆಗಾಲದ ನಂಜು ಕೂತು ಕೆಸರಿನೊಂದಿಗೆ ಬಿಳಿಯಿಂದ ಕೆಂಪಕ್ಕೆ ತಿರುಗಿ ಸ್ಯಾಂಡ್ವಿಚ್ಚನ್ನು ಅಡ್ಡದಿಂದ ನೋಡಿದಂತೆ ಕಾಣಿಸುತ್ತಿತ್ತು. ಪಟೇಲರ ಅಳಿಯ ಬಿಟ್ಟ – ಕೊಟ್ಟ ಅಂಗಿ ಒದ್ದೆಯಾಗಿ ಮೈಗಂಟಿತ್ತು. ಇನ್ನೂ ಹಸಿಯಾಗಿಯೇ ಉಳಿದ – ಎಲೆ ಅಡಿಕೆ ಉಗುಳುವಾಗ ಕೆಳಬಾಯ್ದುಟಿಯ ಕೆಳಗೆಲ್ಲಾ ಕೆಂಪನೆಯ ಹುಂಡುಗಳಿದ್ದವು. ಒಂದು ಕೆಂಪನೆಯ ಹುಂಡು ತನ್ನೆಲ್ಲಾ ಅಂಶವನ್ನು ಕೆಳಕ್ಕೆ ಜಾರಿಸಿ ಗಡ್ಡದ ಗುಂಟ ಇನ್ನೇನು ಪಟೇಲರ ಅಳಿಯಕೊಟ್ಟ ಅಂಗಿಯಮೇಲೆ ಬೀಳಬೇಕು “ಬಾಯಿ ಒರೆಸಿಕೋ” ಪಟೆಲವ್ವನ ಮಾತನ್ನು ಕೇಳಿ ಮತ್ತೆ ಇಹಕ್ಕೆ ಬಂದ ಮುಕ್ರಿರಾಮ. ಪಟೇಲರೆಲ್ಲಿ ಎಂಬ ಪ್ರಶ್ನೆಯ ಉತ್ತರದ ನಿರೀಕ್ಷೆಯಲ್ಲಿದ್ದ ರಾಮನಿಗೆ ಬಾಯಿ ಒರೆಸಿಕೋ ಎಂದಾಗ ತನ್ನ ಸಮಸ್ಯೆಯ ಆಳವನ್ನು ಅರಿಯದೇಹೋದ ಪಟೆಲವ್ವನಮೇಲೆ ಬೇಸರವಾಯಿತು. ಮತ್ತೆ ಪಟೇಲರೆಲ್ಲಿ ಎಂಬ ಪ್ರಶ್ನೆ ಜಾಗ್ರತವಾಗಿ – ಬಾಯ್ದುಟಿಯನ್ನು ಬಲಗೈಯ್ಯಲ್ಲಿ ಒರೆಸಿಕೊಂಡ ; ಕೆಂಪನೆಯ ಹುಂಡು ಮಾತ್ರ ಅಂಗಿಯ ಮೇಲೆಯೇ ಬಿತ್ತು. “ಯೆಲ್ಲವ್ರೆ ಅಮ್ಮಾ ಪಟೇಲ್ರು?”.

“ಇಲ್ಲಾ ಮಾರಾಯಾ ಅವ್ರು – ಯೇನ್ ಬೇಕಾಗಿತ್ತು ನಿಂಗೆ ? ಮತ್ತೆ ಹೆಂಡ್ತಿ ಒಟ್ಟಿಗೆ ಜಗಳಾ ಮಡ್ಕಂಡ್ ಬಂದಿದೀಯಾ ಅಲ್ವೆನಾ? ಹಾಳಾದವ್ನೆ ಕುಡಿತೀಯಾ ಮೈಮೆಲೆ ಜ್ನ್ಯಾನಾ ಇರ್ದೆ ಹೋದಂಗೆ – ಮೇಲಿಂದ ನಿಂದು ಜಗಳ – ಅದನ್ನ ಸುದಾರಿಸ್ಲಿಕ್ಕೆ ಪಟೇಲ್ರು ಬೇಕು ನಿಂಗೆ” ಪಟೇಲತಿ ಒಳಮನೆಯತ್ತ ತಿರುಗಬೇಕು – ಅದ್ಯಾವುದೂ ತನಗೆ ಹೇಳಿದ್ದೇ ಅಲ್ಲವೆನ್ನುವಂತೆ ಮುಕ್ರಿರಾಮ ತನ್ನ ದುಖ:ದ ಆಳವನ್ನು ಬಿಚ್ಚಿಕೊಳ್ಳುತ್ತ ” ಯೆಂಥಾ ಕಥೆ ನೋಡಿ – ಹೆಸ್ರು ರಾಮ ಆದ್ರೆ ಭಗ್ವಂತಾ ನಂಗೆ ರಾವಣನ ಜೀವ್ನ ಕೊಟ್ಬಿಟ್ಟಾ. ನಾಯಿಪಾಡು ಪಟೆಲವ್ವ ನಂದು. ಅದ್ಯಾವ ಜಲ್ಮದ ಪಾಪನೋ ಗೊತ್ತಿಲ್ಲ. ಈ ಜಲ್ಮದಲ್ಲಿ ಕಾಡಿಸ್ತವ್ನೆ ಆ ದ್ಯಾವ್ರು. ಆ ದ್ಯಾವ್ರದ್ದೂ ಪೂರ್ತಿ ತಪ್ಪಲ್ಲಾ ಬಿಡು ಪಟೆಲವ್ವ. ವಟ್ಟಾರೆ ನನ್ನ ಹಣೆಬರ್ಹಾ ಬದ್ಲ್ ಮಾಡವ್ಳೆ ಅವಳು. ಹೆಂಡತಿ ಲಕ್ಸ್ಮಿಗೆ ಸಮಾನ ಆದ್ರೆ ಇವ್ಳು ಮಾಕಾಳಿ ನಂಗೆ. ಈ ಶನಿ ಅದ್ಯಾವ ಮೂರ್ತದಲ್ಲಿ ಗಂಟ್ ಬಿತ್ತೋ ಗೊತ್ತಿಲ್ಲ ನಂಗೆ. ರಂಡೆ. ನಂಗೇ – ಸ್ವಂತ ಗಂಡಂಗೇ ಮಾಟಾ ಮಾಡ್ಸಿ ಸಿಕ್ಕಪಟ್ಟೆ ಕುಣೀಸ್ತಾಳೆ. ನಾನು ಮುದ್ಕಾ. ಕುಣ್ದು ಕುಣ್ದು ಸತ್ತ್ರೆ ನೆಮ್ಮದಿ ಆ ಬೋಳಿಗೆ…” ಇನ್ನೇನನ್ನೋ ಹೇಳಲು ಬಾಯಿ ತೆಗೆದದ್ದು ತೆಗೆದಂಗೇ-ಪಟೇಲವ್ವ ಮಧ್ಯದಲ್ಲಿ ಬಾಯಿ ಹಾಕಿ – “ಯೇನಾಯ್ತೀಗ?”, ಪಟೇಲವ್ವನ ಮಾತಿನ ಧ್ವನಿಯಲ್ಲಿನ ತಾತ್ಸಾರವನ್ನು ಗ್ರಹಿಸಿದ ರಾಮ ತನ್ನ ಅಸಮಾಧಾನದ ತೀವ್ರತೆಯನ್ನು ಗ್ರಹಿಸದೇ ಇರುವ ಪಟೇಲವ್ವನನ್ನು ಕಂಡು ಇನ್ನಷ್ಟು ಖಿನ್ನತೆ ಮುಖದಲ್ಲಿ ತುಂಬಿಕೊಂಡ. ಕಂಬಳಿ-ಕೊಪ್ಪೆಯನ್ನು ತಲೆಯಿಂದ ತೆಗೆದ. ಅದೇ ಸಮಯದಲ್ಲಿ ಅದೆಲ್ಲಿಂದಲೋ ದೂರದ ಅರಬ್ಬೀ ಸಮುದ್ರದಿಂದ ಬೀಸಿದ ಗಾಳಿ ಪಟೇಲರ ಮನೆಯಂಗಳದ ಅಂಚಿನಲ್ಲಿರುವ ಚಿಕ್ಕು ಮರವನ್ನು ಹಿಡಿದು ಎಲೆಯನ್ನೆಲ್ಲಾ ಒಮ್ಮೆ ಅಲುಗಾಡಿಸಿತು. ಮರದ ಕೆಳಗೆ ಎಲೆ-ಅಡಿಕೆ ಉಗಿಯಲು ಹೋದ ಮುಕ್ರಿರಾಮನ ಮೈಮೇಲೆಲ್ಲಾ ಎಲೆ ಹಿಡಿದುಕೊಂಡ ನೀರಿನ ಹನಿಗಳು ಪಟಪಟನೆ ಬಿದ್ದವು. ತನ್ನ ದುಖ:ವನ್ನು ಈ ಚಿಕ್ಕುಮರ ಹೀಯಾಳಿಸುವಂತೆ ಅನ್ನಿಸಿ ತುಸು ಗಟ್ಟಿಯಾಗೇ ಮರಕ್ಕೆ ಬಯ್ದುಕೊಂಡ. ತನ್ನಬಗ್ಗೆ ಒಂದು ಸಾಮನ್ಯ ಮರಕ್ಕೂ ಕನಿಕರವಿಲ್ಲದ್ದು ಕಂಡು – ಅದಿನ್ನೇನನ್ನೋ ಮರಕ್ಕೆ ಬೈಯಬೇಕು ಅಷ್ಟರಲ್ಲಿ ಮತ್ತೆ ಮಳೆ ಶುರುವಾಯಿತೆಂದೆನ್ನಿಸಿ ಅಂಗಳದ ಅಡಿಕೆ ಅಟ್ಟಣಿಗೆಯ ಕೆಳಗೆ ಸೇರಿಕೊಂಡ. ಮಳೆ – ಚಿಕ್ಕುಮರ – ಪಟೇಲವ್ವ ಇವ್ಯವುವೂ ತನ್ನ ಶೋಕದಲ್ಲಿ ಬಾಗಿಯಾಗಿರದೇ ಹೋದದ್ದು ರಾಮನಿಗೆ ಕೊಂಚ ಅಸಹನೆ ತಂದಿತು.
ಇದರ ಮಧ್ಯೆ ಅವನ ಮುಖದ ಪ್ರಕ್ಷುಬ್ಧತೆಯ ಆಳವನ್ನು ಮುಖಭಾವದಿಂದ ಅಳೆಯಲು ಪಟೇಲವ್ವನಿಗೆ ಸಾಧ್ಯವಾಗದೆ ಇರಲು ಎರಡು ಕಾರಣಗಳಿತ್ತು. ಮೊದಲನೆಯದಾಗಿ ಪಟೇಲವ್ವನ ಕಣ್ಣಿಗೆಕಟ್ಟಿದ ಪೊರೆ – ಇನ್ನೆರಡನೆಯದು ಮುಕ್ರಿರಾಮನ ಸುಕ್ಕುಗಟ್ಟಿದ ಮುಖ. ಅವನ ಕಣ್ಣಿನ ಸುತ್ತ ಸುಕ್ಕು ಹಿಡಿದ ಚರ್ಮ ಎದುರಿಗೆ ಇದ್ದವರಲ್ಲಿ ಯಾವುದೇ ಭಾವನೆಯನ್ನು ಪ್ರಚುರಪಡಿಸಲು ಸಾಧ್ಯವಾಗದ ಮಟ್ಟಿಗೆ ಕಳೆಗುಂದಿತ್ತು. ಹೀಗಾಗಿ ಅವನ ಶೋಕದ ಆಳ-ಅಳತೆಯನ್ನು ಕೇವಲ ಮಾತಿನ ಧಾಟಿಯಲ್ಲಿ – ಅದರ ಏರಿಳಿತ ಮತ್ತು ಸಾಪೇಕ್ಷ ತೀವ್ರತೆಯಲ್ಲಿ ಎದುರಿಗಿರುವವರು ಅಳೆಯಬೇಕಾಗಿತ್ತು. ಹೀಗಾಗಿ ಇಷ್ಟೆಲ್ಲ ಕಷ್ಟಪಟ್ಟು ಅವನ ದುಖ:ವನ್ನು – ಅದರ ಆಳವನ್ನು ಯಾರೂ ಕೇಳಿ ಅರಿತು ಅವನನ್ನು ಸಮಾಧಾನಪಡಿಸುವ ಗೊಜಿಗೆ ಹೋಗುತ್ತಿರಲಿಲ್ಲ. ಆದರೆ ಪಟೇಲರು ಅವನನ್ನು ಹೆಚ್ಚು ಸ್ಪಂದಿಸುತ್ತಿದ್ದರು ತಾಳ್ಮೆಯಿಂದ. ಅದಕ್ಕಾಗಿ ಪಟೇಲರಲ್ಲದೇ ಬೇರೆಯವರಲ್ಲಿ ತನ್ನದನ್ನು ತೋಡಿಕೊಂಡರೆ ಮುಕ್ರಿರಾಮನಿಗೆ ಸಮಾಧಾನವಿರಲಿಲ್ಲ. ಈಗ ಪಟೇಲರಿಲ್ಲದ್ದರಿಂದ ಪಟೇಲವ್ವನ ಹತ್ತಿರ ಹೇಳಿಕೊಳ್ಳದೇ ಬೇರೆ ಉಪಾಯವೇ ಇರಲಿಲ್ಲ.

ಮುಕ್ರಿರಾಮ ಶುರುವಿಟ್ಟುಕೊಂಡ- ತಂಬಾಕಿನ ಎಸಳನ್ನು ಕವಳದ ಚಂಚಿಯಿಂದ ತೆಗೆದು ಉಂಡೆ ಕಟ್ಟಿ ಬಾಯಲ್ಲಿ ಹಾಕಿಕೊಳ್ಳುತ್ತ ” ಬೋಳಿರಂಡೆ… ನನ್ನ ಮೇಲೇ ಮಾಟಾ ಮಂತ್ರ ಮಾಡ್ಸವ್ಳೆ, ನನ್ನನ್ನಾ ಕುಣಿಸಿ ಚಂದಾ ನೋಡ್ತಾಳೆ. ನಂಗೆ ಕೂತಲ್ಲಿ ಕೂತ್ಗಳುಕಾಗುದಿಲ್ಲ. ನಾನು ಯಾವ ದ್ಯಾವ್ರಲ್ಲಿ ತೆಂಗಿನಕಾಯಿ ಇಟ್ಟು ಪೂಜೆ ಮಡಿದ್ರು ಪಿರ್ಯೋಜ್ನಾ ಇಲ್ಲ. ಪರಿಹಾರ ಇಲ್ಲ. ಸ್ವಂತ ಗಂಡ – ಮುದ್ಕಾ ನಾನು ; ನನ್ನ ಮೇಲೇ ಮಾಟಾ ಮಾಡ್ಸಿ ಅಕ್ಕಿ ಕಡೀಸವ್ಳೆ. ಕೊಟ್ಗೆ ಜಟಗ – ಚಂದಾವರ ಹನಮಂತ ದ್ಯಾವ್ರು – ತಲ್ಗೆರೆ ಅಮ್ನೌರು – ಎಲ್ಲಾ ದ್ಯಾವ್ರತ್ರ ಹೇಳ್ಕಂಡ್ ಆಯ್ತು, ಅಂತ್ರವಳ್ಳಿ ಹಬ್ಬಕ್ಕೆ ಕೋಳಿ ಕಡೀಸ್ತೆ ಹೇಳಿ ಹೇಳ್ಕಂಡೆ. ಯಾವ್ ದ್ಯಾವ್ರೂ ಹತ್ರ ಸುಳೀಲಿಲ್ಲ – ಯೆಲ್ಲಾ ದಿಗ್ಭಂದನಾ ಪಟೇಲವ್ವಾ ಯೇಲ್ಲಾ ದಿಗ್ಭಂದನ. ಒಂದ್ರಲ್ಲೂ ನಿವ್ರತ್ತಿಯಿಲ್ಲಾ ನಂಗೆ. ಪಟೇಲ್ರ ಮನೆಗೆ ಕೆಲ್ಸಕ್ಕೆ ಹೋಗ್ತೆ ಹೇಳಿ ಮನೆಯಿಂದ ಪ್ರತೀ ದಿನ ಬೆಳ್ಗೆ ಯೆಂಟ್ ಗಂಟೆಗೆ ಹೊರ್‍ಅಡ್ತಾಳೆ. ಇಲ್ಲಿ ನಿಮ್ಮನೆ ಕೆಲ್ಸಕ್ಕೆ ಯೆಷ್ಟ್ ಗಂಟೆಗೆ ಬರ್ತಾಳೆ ಹೇಳಿ?” ಪಟೇಲವ್ವನ ಬಾಯಲ್ಲೇ ಏನೊ ಸತ್ಯವನ್ನು ಹೋರಹಾಕಲು ಹೊರಟ ಮುಕ್ರಿರಾಮನ ಮಾತಿನ ವರಸೆಯನ್ನು ನೋಡಿ ಸ್ವತ: ಪಟೇಲವ್ವನೇ ಮಾತಾಡಲಾರದಾದರು. “ಹಾಂ… ಇಲ್ಲಿಗೆ ಹತ್ತು ಗಂಟೆ ಒಳ್ಗೆ ಕೆಲ್ಸಕ್ಕೆ ಬರುದಿಲ್ಲಾ ಅಲ್ವ ಪಟೇಲವ್ವಾ?” ಪಟೇಲವ್ವ ಹೂಂ-ಹಾಂ ಅನ್ನಲಿಲ್ಲ. ಅದರ ಅವಶ್ಯಕತೆಯೂ ಇಲ್ಲದಂತೆ ಮುಕ್ರಿರಾಮ ಮಾತು ಮುಂದುವರಿಸಿದ.”ಅವ್ವಾ.. ಯೆಂಟ್ ಗಂಟೆಗೆ ಮನೆಯಿಂದ ಹೊರಟು ಇಲ್ಲಿಗೆ ಹತ್ತ್ ಗಂಟೆಗೆ ಬರ್ತಾಳೆ ಅಂದ್ರೆ ಮಧ್ಯ ಯೆರಡ್ ತಾಸು ಅದೆಲ್ಲಿಗೆ ಹೋಗ್ತಾಳೆ – ಕೇಳಿ ನನ್ನವ್ವ ನೀವೇ ಕೇಳ್ ನೊಡಿ ಒಂದ್ ದಿನ. ಅದ್ಯಾರ ಸಂತಿಗೆ ಬೆಟ್ಟಾ ಹತ್ತ್-ತಾಳೋ ; ಅದ್ಯಾರ ಸಂತಿಗೆ ಮಡ್ಸ್ಕೊಳ್ತಾಳೋ…” ಪಟೇಲವ್ವನಿಗೆ ಒಮ್ಮೆಲೇ ಮುಕ್ರಿರಾಮ ವಿಷಯವನ್ನು ಇಳಿಸಿದ್ದನ್ನು ನೋಡಿ ದಂಗುಬಡಿದು ಹೋದರು. ತನ್ನ ಗಂಡನಲ್ಲದೇ ಇನ್ನೊಬ್ಬ ಗಂಡಸು ಹೀಗೆಲ್ಲಾ ತನ್ನಬಳಿ ನಿಸ್ಸಂಕೋಚವಾಗಿ ಇಂಥಾ ವಿಷಯವನ್ನೆಲ್ಲಾ ಮಾತಾಡಬಲ್ಲ ಎಂದು ಪಟೇಲವ್ವ ಅದ್ಯಾವತ್ತೂ ಎಣಿಸಿರಲಿಲ್ಲ. ಪಟೇಲರು ಒಳಗಡೆ ಇಲ್ಲದೇ ಹೋಗಿದ್ದರೆ ಮುಜುಗರ ಪಡುತ್ತಿದ್ದಳೋ ಇಲ್ಲವೂ ಗೊತ್ತಿಲ್ಲ. ಈಗಂತು ಮುಜುಗರವೆನಿಸಿದ್ದು ನಿಜ. ಮುಕ್ರಿರಾಮನ ಈ ಮಾತುಗಳಿಗೆ ಅದ್ಯಾವ ರೀತಿಯಲ್ಲಿ ಸ್ಪಂದಿಸಬೇಕೆನ್ನುವುದನ್ನು ಅರಿಯದೇ ಪಟೇಲವ್ವ ಮೌನವಾಗಿ ಮುಕ್ರಿರಾಮನ ಮುಖ ನೋಡಿದಳು. ಮುಕ್ರಿರಾಮ ಅದ್ಯಾವುದನ್ನೂ ಗಮನಕ್ಕೆ ತಂದುಕೊಳ್ಳದೇ ಮಾತಾಡುತ್ತಲೇ ಇದ್ದ ಮಳೆಯಂತೆ. “ಈ ವಯಸ್ಸಲ್ಲಿ ನಾನು ಹೆಂಡ್ತೀನಾ ಯೆಷ್ಟು ಕಾಯ್ಲಿ ಪಟೇಲವ್ವ .. ನಾನು ಹೆಂಡ್ತೀನಾ ಕಾಯ್ಲೋ ಅಥವಾ ಕೆಲ್ಸಕ್ಕೆ ಹೋಗ್ಲೋ.. ಇದ್ದೊಬ್ಬ ಮಗಾ ಆಚಾರಿ ಮಗಳನ್ನ ಓಡಿಸ್ಕೊಂಡ್ ಹೋದಾ.. ಇವತ್ತಿಗೆ ಐದು ವರ್ಷಾ ಆಯ್ತು. ಯೆಲ್ಲವ್ನ್ನೋ – ಹ್ಯಾಂಗವ್ನೋ ದ್ಯಾವ್ರಿಗೇ ಗೊತ್ತು. ನಿಂಗಿಮನೆ ಮಹಾಬ್ಲ ಈಗೊಂದು ಆರು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ನೋಡಿದ್ನಂತೆ. ತಲೆ ಚೌವ್ರ ಮಾಡ್ಸಿ ಬೋಳು ಕೆತ್ತ್ಕಂಡಿದ್ನಂತೆ. ಮಹಾಬ್ಲ ಇವನ್ನನ್ನಾ ಕರೆದ ಕೂಡ್ಲೆ ಓಡಿ ಹೋದ್ನಂತೆ -ಮತ್ತೆ ಇಡೀ ದಿನ ಇಡೀ ಧರ್ಮಸ್ಥಳ ಹುಡ್ಕಿದ್ರು ಕಣ್ಣಿಗೆ ಬೀಳಲೇ ಇಲ್ವಂತೆ. ತಾನ್ ಮಾಡಿದ ಪಾಪ ಪರಿಹಾರಕ್ಕೆ ಧರ್ಮಸ್ಥಳದಲ್ಲಿ ಮುಡಿ ಕೊಟ್ಟಿರ್ಬೇಕು – ಅಪ್ಪನ ಕಣ್ಣಲ್ಲಿ ನೀರ್ ಹಾಕ್ಸಿದವ ಯೆಷ್ಟ್ ಮುಡಿ ಕೊಟ್ರೆ ಪಿರ್ಯೊಜ್ನ ಯೇನು ಪಟೇಲವ್ವ.. ಆಚಾರಿ ಮಗಳೊಟ್ಟಿಗೆ ಅದೆಲ್ಲಿ ಉಳ್ಕಂಡವ್ನೋ – ಅಲ್ಲಾ ಆಚಾರಿ ನಮ್ಗಿಂತಾ ಜಾತಿಲಿ ಮೇಲೆ – ಇವಂಗೆ ಮನೆಲಿ ಬಂದು ಉಳ್ದ್ರೆ ನಾನೇನ್ ಬ್ಯಾಡಾ ಅಂತಿದ್ನಾ. ಇವ್ನಾ ಅಮ್ಮಾ ಬೆಟ್ಟಾ ಹತ್ತೊದು ಆಗಾದ್ರು ನಿಲ್ತಿತ್ತೇನೊ. ಒಂದ್ ಸಮಾಧಾನ ಅಂದ್ರೆ ಮಗ ಬದ್ಕವ್ನೆ. ವಂಶ ನಿಲ್ಲಿಲ್ಲ. ಆದ್ರೆ ಈ ರಂಡೆ ಊರ್ ತುಂಬಾ ವಂಶಾ ಬೆಳ್ಸಾಕ್ ಹೋರ್‍ಟವ್ಳೆ ಪಟೇಲವ್ವಾ. ಇದ್ಕೆಲ್ಲಾ ಈ ರಂಡೆನೇ ಕಾರಣ ಪಟೇಲವ್ವಾ. ಇವ್ಳು ಮಾಡ್ಸಿದ ಮಾಟಾ ಮಂತ್ರಾನೇ ಕಾರಣಾ. ವಶೀಕರ್ಣಾ ಮಾಡ್ಸವ್ಳೆ ಸ್ವಂತ ಗಂಡನ ಮೇಲೆ. ವಯಸ್ಸು ಐವತ್ತು ದಾಟಿದ ಮೇಲೆ ಇವಳಿಗೆ ಚಟ ಬಂದಿದೆ. ನನ್ನ ಕೈಯ್ಯಲ್ಲಿ ಆಗುದಿಲ್ಲಾ ನೋಡಿ – ಮುದ್ಕಾ, ಇವ್ಳಿಗೆ ಚಟ ನಿಲ್ಲಲಿಲ್ಲಾ. ನಾನಾದ್ರು ಈ ವಯಸ್ಸಲ್ಲಿ ಯೇನ್ ಮಾಡ್ಲಿ ಹೇಳಿ..” ಎಂದು ಒಂದೇ ಉಸಿರಿನಲ್ಲಿ ಬಸುರಿ ಇಳಿಸಿದವನಂತೆ ರಾಮ ನಿಟ್ಟುಸಿರು ಬಿಟ್ಟ. ಮುಕ್ರಿರಾಮನ ಮಾತಿನ ವರಸೆ ಮತ್ತು ಸೆನ್ಸಾರ್ ಇಲ್ಲದ ಹರಿವು ನೋಡಿ ಈಗಾಗಲೇ ಹೆದರಿದ್ದ ಪಟೇಲವ್ವ – ತುದಿಯಲ್ಲಿ ತನಗೇ ಇಟ್ಟ ಪ್ರಶ್ನೆ ಮತ್ತು ಅದರ ಉತ್ತರದ ನಿರೀಕ್ಷೆ ಇದ್ದಂತೆ ರಾಮ ಧರಿಸಿದ ಮೌನ ನೋಡಿ ಒಳಮನಸ್ಸಿನಲ್ಲೇ ಒಳಮನೆಯಲ್ಲಿ ಇದ್ದ ಪಟೇಲರ ಮೇಲೆ ಕೋಪಗೊಂಡಳು. ಮೌನವೊಂದು ಹುಟ್ಟಿಸಿದ ಭೀತಿಯಿಂದ ಅದೇನು ಮಾಡಬೇಕೋ ಗೊತ್ತಗದೇ … ಮತ್ತೆ ರಾಮ ” ಪಟೇಲ್ರು ಯೆಲ್ಲಿಗೆ ಹೋಗವ್ರೆ ..? ” ಪಟೇಲತಿಗೆ ಇದೊಂದೇ ಅವಕಾಶವೆನ್ನುವಂತೆ ಸಡನ್ನನೆ ಒಳಮನೆಯ ಕೆಲಸದ ನೆನಾಪಾದಂತೆ ” ಹೋಯ್ ಪಟೇಲ್ರೆ.. ನಿಮ್ಮ ಆಳು ಕರೇತಿದ್ದಾ ನೋಡಿ.. ಬನ್ನಿಇಲ್ಲಿ… ” ಎಂದು ಒಳಮನೆಯ ಕತ್ತಲೆ ಸೇರಿಕೊಂಡಳು ಪಟೇಲವ್ವ. ಒಳ ಕತ್ತಲೆಯಲ್ಲಿ ಕೂತು ಗ್ರಹಿಸುತ್ತಿದ್ದ ಪಟೇಲರಿಗೆ ಪಟೇಲವ್ವನ ಮೇಲೆ ಒಮ್ಮೆಲೇ ಹೀಗೆ ಮಾಡಿದ್ದು ನೋಡಿ ಕೋಪಬಂತು. ಬಂದ ಕೋಪವನ್ನು ಕತ್ತಲೆಯಲ್ಲಿ ಮೌನವಾಗಿ ನುಂಗಿಕೊಂಡರು.

ಒಂದೈದು ನಿಮಿಷ ಬಿಟ್ಟು ಪಟೇಲರು ಒಳಮನೆಯಿಂದ ಹೊರ ಚಾವಡಿಗೆ ಬಂದು ಆರಾಮ ಖುರ್ಚಿಗೆ ಒರಗುತ್ತ “ಅರೆ ರಾಮಾ .. ಯಾವಾಗ ಬಂದ್ಯಾ?? ಕುಡೀಲಿಕ್ಕೆ ಏನಾದ್ರು ಬೇಕಾ ನಿಂಗೆ … ? ಹಿತ್ತಲಾಕಡೆ ಒಂದು ಲಿಂಬೆ ಗಿಡ ನೆಡುತ್ತಿದ್ದೆ.” ಪಟೇಲರು ಒಳಗಿಲ್ಲವೆಂಬ ಪೂರ್ವಕಲ್ಪಿತದಲ್ಲಿ ಈ ಪೂರ್ವದಲ್ಲಿ ಮಾತನಾಡಿದ ಮಾತುಗಳನ್ನೆಲ್ಲಾ ಒಮ್ಮೆ ಒಳಮನಸ್ಸಿನಲ್ಲಿಯೇ ಅವಲೋಕಿಸಿಕೊಂಡ. ಆದರೆ ಆಡಿದ ಮಾತುಗಳ್ಯಾವುವೂ ತನ್ನ ಸಮಸ್ಯೆಯ ಮುಂದೆ ಅವಲೋಕಿಸಲರ್ಹವಲ್ಲದಂತೆ ಅನ್ನಿಸಿತು ಮುಕ್ರಿರಾಮನಿಗೆ. “ಏನಾ… ಎಂಥಾ ಸಮಸ್ಯೆನಾ ನಿಂದು..? ಆ ನಿನ್ ಬಡವಿ ಹೆಂಡ್ತಿ ಮೇಲೆ ಏನ್ ಗಲಾಟೆ ನಿಂದು…?” ಎಂಬ ಪಟೇಲರ ಗಟ್ಟಿ ಧ್ವನಿಯಿಂದ ರಾಮ ಕೊಂಚ ಶಾಂತಾನದ – ಉದ್ವೇಗ ಕಡಿಮೆ ಆದಂತೆ. ಒಮ್ಮೆಲೇ ಶಾಂತಗೊಂಡ ತನ್ನ ಉದ್ವೇಗ- ಹುಟ್ಟಿದ ಸಣ್ಣನೆಯ ಅಧೈರ್ಯ , ಎಲ್ಲ ಕಳೆದುಕೊಂಡ ಭಾವನೆಯಿಂದ ಹುಟ್ಟಿದ್ದೋ ಅಥವಾ ಪಟೇಲರ ಗಟ್ಟಿ ಘರ್ಜನೆಯಿಂದ ಹುಟ್ಟಿದ್ದೋ ಅರಿಯದಾದ. “ಪಟೇಲ್ರೆ ನೀವೇ ಒಂಚೂರು ಪಂಚಾಂಗ ನೋಡಿ ಹೇಳಿ – ಯಾವಾಗ ನನ್ನ ಕಷ್ಟ ಎಲ್ಲ ಪರಿಹಾರ ಆಗ್ತದೆ ಹೇಳಿ. ಮಗ ಓಡ್ ಹೋದ – ಹೆಂಡ್ತಿ ಈ ವಯಸ್ಸಲ್ಲಿ ಅದ್ಯರದ್ದೋ ಸಂತಿಗೆ ಬೆಟ್ಟಾ ಹತ್-ತಾಳೆ.” ಪಟೆಲರು ನಿಲ್ಲು ಎಂದು ಕೈಯ್ಯಲ್ಲೇ ಸನ್ನೆ ಮಾಡಿದ್ದು ನೋಡಿ ಅಷ್ಟಕ್ಕೇ ತಡೆದುಕೊಂಡ. ಪಂಚಾಂಗ ಮನುಷ್ಯಕುಲದ ಪ್ರತಿಯೊಬ್ಬನ ಭೂತ-ವರ್ತಮಾನ ಭವಿಷ್ಯದ ಮಹಾ ಪ್ರಬಂಧ ಎಂದು ತಿಳಿದುಕೊಂಡ ರಾಮನ ಮುಗ್ಧತೆ ನೋಡಿ ಪಟೇಲರು ತೋರಿಸಿಕೊಳ್ಳದೇ ಸಣ್ಣಗೆ ಮೀಸೆಯಂಚಿನಲ್ಲಿ ನಕ್ಕು ಪಂಚಾಂಗ ತರಲು ಒಳಮನೆಯ ಕತ್ತಲೆಯಲ್ಲಿ ಮರೆಯಾದಂತೆ ರಾಮ ತನ್ನ ಸಮಸ್ಯೆ ಅರ್ಧ ಪರಿಹಾರವಾದಂತೆ ಕ್ಷಣ ನೆಮ್ಮದಿಯಲ್ಲಿ ಗಟ್ಟಿ ಉಸಿರು ಬಿಟ್ಟ. ತನ್ನ ಕಷ್ಟ ಸಮಸ್ಯೆಗಳನ್ನು ಮತ್ತೆ ಪಟೇಲರಿಗೆ ವಿವರಿಸರು ಹೋಗಲಿಲ್ಲ ರಾಮ, ಒಳಮನೆಯಿಂದ ತನ್ನೆಲ್ಲ ಮಾತನ್ನು ಗ್ರಹಿಸಿದರೆಂಬ ದ್ರಢ ನಂಬಿಕೆಯಿಂದ. ಅದಾಗಲೆ ಮಳೆ ನಿಂತು ಕುಮಟೆಯಿಂದ ಹೊರಟ ಕೆಂಪುಬಸ್ಸು ಕೇರಗಜನಿ ಘಟ್ಟ ಏರಲು ಹರಸಾಹಸ ಪಡುತ್ತಿದ್ದ ರೋದನ – ದೂರದ ಅರಬ್ಬೀ ಕಡಲಬ್ಬರದೊಟ್ಟಿಗೆ ಕೇಳಿಸಿತು. ಪಟೇಲರು ಮುಖವೆತ್ತಿ ಬೆಳ್ಳಾರೆ ಪರ್ವತವನ್ನೂ – ಅದನ್ನೇ ತಲೆಯಮೇಲೆ ಹೊತ್ತು ನಿಂತಂತೆ ನಿಂತ ಮುಕ್ರಿರಾಮನನ್ನೂ ನೋಡಿ ಮತ್ತೆ ಬಗ್ಗೋಣು ಪಂಚಾಂಗದಲ್ಲಿ ಮುಖ ಹಾಕಿಕೊಂಡರು. “ಬರುವ ಶ್ರಾವಣದಿಂದ ನಿನ್ನ ಎಲ್ಲ ಸಮಸ್ಯೆಗಳು ಮಣ್ಣು ಕಾಣ್ತವೆ ನೊಡು ರಾಮಾ. ಇಡಗುಂಜಿ ದೇವ್ರಿಗೆ ತೆಂಗಿನಕಾಯಿ ಒಡೆಸು.” ಅಂಗಳದೊಂದು ಮೂಲೆಯಲ್ಲಿ ಬೆಳೆದ ಕೋಟೆಗಿಡಕ್ಕೆ ಬಿಟ್ಟ ಹೂವನ್ನು ಪಾತರಗಿತ್ತಿಯೊಂದು ಸುತ್ತುಹಾಕುತ್ತಿತ್ತು. ಮುಕ್ರಿರಾಮ ಇಷ್ಟಕ್ಕೇ ಸಮಾಧಾನಗೊಂಡಿಲ್ಲ ಎಂದು ಪಟೇಲರಿಗೆ ತಿಳಿಯುವುದರಲ್ಲಿ ಬಹಳ ಸಮಯ ಹಿಡಿಯಲಿಲ್ಲ. ಅಂಗಳದ ಮೂಲೆಯಲ್ಲಿ ತನ್ನ ಬಾಯಲ್ಲಿ ತುಂಬಿದ ಎಲೆಅಡಿಕೆಯನ್ನು ಎರಡೆರಡು ಬಾರಿ ಉಗಿದು , ನಾಲಿಗೆಯ ಅಡಿಯಲ್ಲಿ ಅದಿನ್ನೂ ನುಣುಪಾಗದ ಎಲೆಅಡಿಕೆಯ ಶೇಷಗಳನ್ನು -ನಾಲಿಗೆಯನ್ನು ಸ್ವಲ್ಪ ಎತ್ತಿ – ಗಟ್ಟಿಯಾಗಿ ಗಾಳಿ ಊದುತ್ತ ಸ್ಪ್ರೇ ಮಾಡಿ ತಿರುಗು ನೀರಲ್ಲಿ ಬಾಯಿ ಮುಕ್ಕಳಿಸಿ ನಲ್ಲಿಯನ್ನು ಗಟ್ಟಿಯಾಗಿ ತಿರುಪಿ “ಕೀಈ… ” ಎಂದು ಕೂಗಿಸಿದ – ಪಟೇಲರು “ನಿಧಾನಾ..” ಎಂದರು. ಮನಸ್ಸಿನ ಭಾವೋದ್ವೇಗಗಳ ಮಧ್ಯೆ ಪಟೇಲರ ’ನಿಧಾನಾ..’ ಕೇಳಿಸದೇ ನಲ್ಲಿಯನ್ನು ಇನ್ನಷ್ಟು ಕೂಗಿಸಿದ.

“ನೋಡು ರಾಮಾ ಅವ್ಳು ಯಾಕೆ ನಿನ್ನ ಮೇಲೆ ಮಾಟಾ- ಮಂತ್ರಾ ವಶೀಕರ್ಣಾ ಮಾಡಿಸ್ತಾಳೆ ಹೇಳು. ಅವಳಿಗೆ ಇನ್ಯಾರದೋ ಒಟ್ಟಿಗೆ ಬೆಟ್ಟಹತ್ತುವ-ಸರಸ ಆಡುವ ಅವಶ್ಯಕತೆಯಾದರೂ ಏನಿದೆ ? ನಿನ್ನ ಹೆಂಡತಿಗೆ ಐವತ್ತು ವಯಸ್ಸಾಗಿರಬಹುದು. ಈ ಪ್ರಾಯದಲ್ಲಿ ಅವಳ ಮೇಲೆ ಅನುಮಾನ ಎಷ್ಟು ಸರಿ? ” ನಲ್ಲಿಯ ಪಕ್ಕದಲ್ಲಿ ಹುಟ್ಟಿಕೊಂಡ ಕೆಂದಾಸವಾಳದ ಗಿಡಕ್ಕೆ ಬಿಟ್ಟ ಹೂವು ಮಳೆಯ ಭಾರದಿಂದ ನೆಲ ನೋಡುತ್ತಿತ್ತು – ರಾಮ ಕೂಡ. ಮತ್ತೆ ಮಳೆ ಶುರುವಿಟ್ಟುಕೊಂಡಿತು. ಮಳೆಯ ಲಯವನ್ನು – ಉಳ್ಳಂತಿಯ ಬೋರ್ಗರೆತವನ್ನು ಹಿನ್ನೆಲೆಯಲ್ಲಿ ಗ್ರಹಿಸುತ್ತ ಕೆಲಕಾಲ ಇಬ್ಬರೂ ಮಾತಾಡಲಿಲ್ಲ. ರಾಮ ಉದ್ವೇಗವನ್ನು ಅರೆಯಲು ಇನ್ನೊಂದು ಎಲೆ-ಅಡಿಕೆ ತಯಾರಿ ಶುರುಮಾಡಿಕೊಂಡ. ತಲೆಯ ಮೇಲಿನ ನೀರು ಹಣೆಯನ್ನು ದಾಟಿ ಹುಬ್ಬಿನ ಗಂಟುಗಳ ಗುಂಟ ಶೇಖರಣೆಗೊಂಡು ಎರಡು ತೊಟ್ಟು ಅಂಗಿಯ ಮೇಲೆ ಬಿದ್ದಿರಬೇಕು. ಕಾಲಿನ ಪೈಂಟು ಹೋದ ಜಾಗದಲ್ಲಿ ಕೆರೆತ ನೀಗಿಸುತ್ತ ,”ನಂಗೆ ಮೋದ್ಲಿಂದಾನೂ ಇವಳ ಮೇಲೆ ಅನುಮಾನ ಇತ್ತು ಪಟೇಲ್ರೆ, ಮದ್ವಿ ಆದಾಗಿಂದ ಸರಿ ಇಲ್ಲ. ಶೋಬನದ ದಿನ ಬೋಣಿಗೆ ನಂದಲ್ಲಾ ಅನ್ನ್ಸಿತ್ತು. ಇವಳಪ್ಪ ಬ್ಯಾವರ್ಶಿ.. ನಂಗೆ ಕಟ್ಟಿದ ಇವಳನ್ನ – ನಾನಾದ್ದಕ್ಕೆ ಹೊಂದ್-ಕಂಡು ಸಂಸಾರ ಮಾಡ್ದೆ. ಇನ್ಯಾರೇ ಆಗಿದ್ರು ಇಷ್ಟ್-ಹೊತ್ತಿಗೆ ಇವಳ ರಣ ಹಾರಿಸ್ತಿದ್ರು. ಸ್ವಂತ ಗಂಡನ ಮೇಲೇ ವಶೀಕರ್ಣ ಮಾಡ್ಸವ್ಳೆ ಅಂದ್ ಮೇಲೆ ಲೆಕ್ಕಾ ಹಾಕಿ ಪಟೇಲ್ರೆ. ಆ ದ್ಯಾವ್ರು ನಂಗೆ ಕೆಟ್ಟ ಬುದ್ದಿ ಕೊಟ್ಟು ಇವಳನ್ನ ಮದ್ವಿ ಆಗು ಅಂದ ; ಬೆಟ್ಟದ ದ್ಯಾವ್ರನ್ನಾ ಕೇಳ್ದೆ- ದ್ಯಾವರ ತಲೆ ಮೇಲೆ ಇಟ್ಟ ನಂಜಟ್ಲೆ ಹೂವು ದ್ಯಾವರ ಬಲಕ್ಕೆ ಬಿದ್ರೆ ಮದ್ವೆ ಆಗ್ತೆನೆ ಅಂತ ಮಾತಯ್ತು. ಇಟ್ಟ ಹೂವು ಎಡಕ್ಕೆ ಬಿತ್ತು ದ್ಯಾವ್ರು ಬ್ಯಾಡ ಅಂದಿದ್ದು ನೋಡಿ ಬೇಜಾರಾಯ್ತು- ಇವಳ ನೆನಪಾಗಿ ಮೂರು ಸಲ ಇಟ್ಟು ನೋಡುವ ಹೇಳಿ ಇನ್ನೊಂದ್ ಸಲ ಹೂವಿಟ್ಟೆ , ಎರಡನೇ ಸರ್ತಿ ಬಲಕ್ಕೆ ಬಿತ್ತು – ಮತ್ತೆ ಮೂರ್ನೆ ಸರ್ತಿ ಕೂಡ. ” ಬಂದು ಮದ್ವೆ ಆದೆ. ದ್ಯಾವ್ರು ಮೋದಲನೇ ಸರ್ತಿನೇ ಸೂಚ್ನೆ ಕೊಟ್ಟಿದ್ದ – ಆದ್ರೆ ನಾನು ಮೂರ್ಖತನ ಮಾಡಿ ಮೂರ್ ಸಲ ಹೂವಿಟ್ಟು ದ್ಯಾವ್ರನ್ನೇ ಒಪ್ಸ್ಕೊಂಡ್ ಬಂದೆ. ಕೆಟ್ಟ ಗಳ್ಗೆ – ಕೆಟ್ಟ ಬುದ್ದಿ – ಪ್ರಾಯಾ. ಆದ್ರೆ ಆ ದಿನ ನಂಗೆ ಮೂರು ಸಲ ಹೂವಿಟ್ಟು ಪ್ರಸಾದ ನೋಡ್ಲಿಕ್ಕೆ ಆ ಬೆಟ್ಟದ ದ್ಯಾವ್ರೆ ಬುದ್ದಿ ಕೋಟ್ಟದ್ದು. ಯೆಂಥಾ ದುರ್ದೈವಾ ನೋಡಿ. ಇವ್ಳು ಮೊದ್ಲೇ ಬೆಟ್ಟದ ದ್ಯಾವ್ರನ್ನ ವಶೀಕರ್ಣಾ ಮಾಡಿ ಇಟ್ಟಿದ್ಲು – ದ್ಯಾವರನ್ನೇ ವಶೀಕರಣ ಮಾಡವ್ಳೆ ಅಂದ್ ಮೇಲೆ ಲೆಕ್ಕ ಹಾಕಿ ಪಟೇಲ್ರೆ. ನನ್ನ ಸುತ್ತ-ಮುತ್ತ ಇರೋ ಯಾರನ್ನೂ ಬಿಟ್ಟವ್ಳಲ್ಲಾ ಇವ್ಳು… ” ಪಟೇಲರಿಗೆ ಇಷ್ಟಕ್ಕೇ ಪಿತ್ತ ನೆತ್ತಿಗೇರಿತು. ಒಮ್ಮೆಲೇ ಎದ್ದು ನಿಂತರು. ಗಟ್ಟಿ ಧ್ವನಿಯಲ್ಲಿ , “ನಿನಗೆ ವಶೀಕರಣ ಅಲ್ಲಾ – ತಲೆ ಕೆಟ್ಟಿದೆ. ದಿನಾ ಬೆಳಿಗ್ಗೆ ಆದ್ರೆ ಇಲ್ಲೇ ಕೆಲ್ಸಕ್ಕೆ ಬರ್ತಾಳೆ. ಅವಳು ಎಂಥವಳು ಅಂಥಾ ನಮ್ಗೆ ಗೊತ್ತು- ಅವಳು ಎಂಥವಳು ಅಂತಾ. ಸುಮ್ನೆ ಏನೇನೋ ಹಲುಬಬೇಡ. ಅವಳಿಗೆ ಐವತ್ತಾಯ್ತು – ಮುಟ್ಟು ನಿಂತ್-ಮೇಲೆ ಏನ್ ಚಟಾ ಮಣ್ಣು. ಚಟಾನು ಇಲ್ಲ ಖರ್ಮಾನೂ ಇಲ್ಲ. ಎಲ್ಲ ನಿನ್ ಭ್ರಮೆ. ಹೋಗು ನಡಿ ಮನೆಗೆ. ಸುಮ್ಮನೇ ಇಲ್ಲದೇ ಹೋದದ್ದೆಲ್ಲಾ ಕಲ್ಪನೆ ಮಾಡ್ಬೇಡ. ನಿನ್ನ ತಲೆ ಪೂರಾ ಕೆಟ್ಟು ಹೋಗಿದೆ ಅಷ್ಟೆ. ನಿನ್ನ ಹೆಂಡ್ತಿ ದೇವಿ ಅಂದ್ರೆ – ಸೀತಾ ದೇವಿ ಹಂಗೆ – ನಂಗೆ ಗೊತ್ತು. ಸಾಕ್ಷಾತ್ ಶ್ರೀರಾಮನ ಹೆಂಡತಿ ಅಷ್ಟು ಪವಿತ್ರ ಅವ್ಳು. ಸುಮ್ನೆ ಅವಳ ಮೇಲೆ ಅನುಮಾನ ಪಟ್ರೆ ಪಾಪ ಬರೋದು ನಿಂಗೇ ನೋಡ್ಕೋ..” ರಾಮ ಇನ್ನೇನೋ ಹೇಳಲು ಬಾಯಿ ತೆಗೆಯುವುದರಲ್ಲಿ “ಬಾಯ್ಮುಚ್ಚು ನೀನು.. ಅವಳು ಒಳ್ಳೆಯವ್ಳೇ. ನಿನ್ನ ವಿಚಾರ ಕುಲಗೆಟ್ಟದ್ದು. ಇರುವಷ್ಟು ದಿನ ಚಂದಕ್ಕೆ ಸಂಸಾರ ಮಾಡ್ಕೊಂಡು ಹೋಗು. ಹಿಂದೊಂದ್ ಸಲ ಹೀಗೆ ನೀನು ಅನುಮಾನ ಪಟ್ಟು ಇಲ್ಲಿಗೆ ಬಂದಾಗಲೇ ಹೇಳಿದ್ದೆ ನಿನಗೆ ಅವಳು ಅಂಥವಳಲ್ಲಾ ಅಂತಾ. ಹೋಗು ನಡಿ – ಇನ್ನೊಂದ್ ಕ್ಷಣ ಇಲ್ಲಿ ನಿಲ್ಬೇಡ. ಹೊಗು..” ಪಟೇಲರು ಒಮ್ಮೆಲೇ ತನ್ನ ಹೆಂಡತಿಯ ಪರ ವಹಿಸಿದ್ದನ್ನು ನೋಡಿ ದಂಗುಬಡಿದು ಹೋದ. ಯಾರನ್ನು ತನ್ನ ಪಾರ್ಟಿ ಎಂದು ನಂಬಿದ್ದನೋ ಅವರೇ ಇವತ್ತು ಕೈ ಕೊಟ್ಟರಲ್ಲ , ಇನ್ನು ಇಡೀ ರಣರಂಗದಲ್ಲಿ ತಾನೊಬ್ಬನೇ ಉಳಿದುಕೊಂಡಂತೆನ್ನಿಸಿತು ರಾಮನಿಗೆ. ಮತ್ತೆ ಮಾತಾಡಿದರೆ ಪಟೇಲರು ಮತ್ತೆ ಬಯ್ಯುತ್ತಾರೆನ್ನುವಲ್ಲಿ ಎರಡಿಲ್ಲ. ” ಹೋಗು ಸಂಸಾರಾ ಮಾಡು – ಇಡಗುಂಜಿ ದೇವರಿಗೆ ತೆಂಗಿನಕಾಯಿ ಓಡೆಸು. ನಡಿ..”- ರಾಮ ಭೂಮಿಗಿಳಿದುಹೋದ. ನಿಧಾನವಾಗಿ ಕತ್ತಿ – ಕಂಬಳಿ- ಕೊಪ್ಪೆಯನ್ನು ಕೈಗೆತ್ತಿಕೊಂಡು ಅಂಗಳದ ಎದುರಿನ ಮೆಟ್ಟಿಲನ್ನು ಇಳಿಯಲು ಶುರುಮಾಡಿಕೊಂಡ. ಮತ್ತೆ ನಿಂತು ಹಿಂದಿರುಗಿ ಪಟೇಲರನ್ನು ನೋಡಿ, ” ನೋಡಿದ್ರಾ ಪಟೇಲ್ರೆ.. ಯಾರನ್ನೂ ಬಿಟ್ಟವ್ಳಲ್ಲ ಅವ್ಳು – ಯೆಲ್ಲವ್ರನ್ನು ವಶೀಕರ್ಣ ಮಡಿಸ್ಕಂಡವ್ಳೆ . ಈಗಾ ನೋಡಿ ನಿಮ್ಮ್ ಮೇಲೂ ವಶೀಕರ್ಣ ಮಾಡ್ಸವಳೆ. ಯಾವಾಗ್ಲೂ ನೀವು ನನ್ ಪರ. ಇವತ್ತು ನೋಡಿ ನಾ ಇಲ್ಲಿಗೆ ಬರ್ತೆನೆ ಹೇಳಿ ಆ ಹಿಡಂಬಿಗೆ ಮೊದ್ಲೇ ಗೊತ್ತಿತ್ತು – ನಿಮ್ ಮೇಲೇ ಮಾಟಾ ಮಾಡ್ಸಿ – ವಶೀಕರ್ಸ್ಕಂಡವ್ಳೆ…..” – ಪಟೇಲರು “…….” ಮಾತಾಡಲಿಲ್ಲ. ರಾಮನ ಶರೀರ ಮೆಟ್ಟಿಲಲ್ಲಿ ಇಳಿದು ಮುಳುಗುತ್ತಾ ಹೋಯಿತು. ಕೊನೆಯಲ್ಲಿ ತಲೆಯ ಮುಂಡಾಸ ಮರೆಯಾಯಿತು.

1 thoughts on “ಯಾರನ್ನೂ ಬಿಟ್ಟವಳಲ್ಲಾ ಪಟೇಲ್ರೆ…

ನಿಮ್ಮ ಟಿಪ್ಪಣಿ ಬರೆಯಿರಿ