ಮರ ಕಡಿಯುವವನ ಕಥೆ ಮತ್ತೊಮ್ಮೆ ನೆನಪಿಸಿಕೊಳ್ಳುವುದಾದರೆ…

Image

ಆತನದು ದಷ್ಟಪುಷ್ಟ ದೇಹ. ಆತನಿಗೆ ಇಂತಹುದೇ ಕೆಲಸ ಮಾಡಬೇಕೆಂಬ ಗೊತ್ತು ಗುರಿಯೇನಿಲ್ಲ. ಆದರೆ ಏನನ್ನಾದರೂ ಮಾಡಬೇಕೆನ್ನುವ ಹಂಬಲ. ಹಾಗಿರುವಾಗ ಒಮ್ಮೆ ಒಬ್ಬ ಸಾಹುಕಾರನಲ್ಲಿ ಕೆಲಸವನ್ನರಸಿ ಹೋಗುತ್ತಾನೆ. ಸಾಹುಕಾರ “ನಿನಗೆ ಮರ ಕಡಿಯಲು ಬರುತ್ತದೆಯೇ” ಎಂದು ಕೇಳುತ್ತಾನೆ. “ಹೌದು ಬುದ್ದಿ, ನಾನು ಆ ಕೆಲಸ ಮಾಡಬಲ್ಲೆ” ಎಂದು ಕೆಲಸಕ್ಕೆ ಹುರುಪಿನೊಂದಿಗೆ ಸೇರಿಕೊಳ್ಳುತ್ತಾನೆ.

ಸೇರಿಕೊಂಡ ಮೊದಲ ದಿನವೇ ಹುಮ್ಮಸ್ಸಿನಿಂದ ಕೆಲಸ ಶುರುವಿಟ್ಟುಕೊಳ್ಳುತ್ತಾನೆ. ಮೊದಲ ದಿನ ನಿರಾಯಾಸವಾಗಿ  ತನ್ನ ಬಾಹು ಬಲದಿಂದ ೧೮ ಮರಗಳನ್ನು ಕತ್ತರಿಸಿ ತಂದು ಸಾಹುಕಾರನಲ್ಲಿ ಒಪ್ಪಿಸುತ್ತಾನೆ. ಇದರಿಂದ ಸಾಹುಕಾರನಿಗೆ ಖುಷಿಯಾಗಿ ಇನಾಮನ್ನು ಗಿಟ್ಟಿಸಿಕೊಳ್ಳುತ್ತಾನೆ.

ಎರಡನೇ ದಿನ ಅದೇ ಹುಮ್ಮಸ್ಸಿನಲ್ಲಿ ಇನ್ನಷ್ಟು ಮರಗಳನ್ನು ಕಡಿದು ಮಲಗಿಸುತ್ತಾನೆ. ಆದರೆ ಈ ದಿನ ಕೊನೆಯಲ್ಲಿ ಎಣಿಸಿದಾಗ  ಕೇವಲ ೧೫  ಮರಗಳನ್ನು ಮಾತ್ರ ಕಡಿದಿರುತ್ತಾನೆ. ಮತ್ತೆ ಮೂರನೆಯ ದಿನ ಇನ್ನಷ್ಟು ಶ್ರಮವಹಿಸಿ ಮರಗಳನ್ನು ಕತ್ತರಿಸುತ್ತಾನೆ ಆದರೆ ಕೊನೆಯಲ್ಲಿ ಎಣಿಸಿ  ನೋಡಿದಾಗ ಮಾತ್ರ ಆತ  ಕಡಿದಿರುವ ಮರಗಳ ಸಂಖ್ಯೆ ಕೇವಲ ಹತ್ತು.

ಇದರಿಂದ ಗಾಬರಿಗೊಂಡ ಆತ  ಸಾಹುಕಾರನಲ್ಲಿ “ಮಹಾಸ್ವಾಮಿ, ನಾನು ಅದೆಷ್ಟು ಶ್ರಮವಹಿಸಿ ಕೆಲಸ ಮಾಡಿದರೂ ನನಗೆ ಮೊದಲಿನಷ್ಟು ಮರಗಳನ್ನು ಕಡಿಯಲು ಸಾಧ್ಯವಾಗುತ್ತಿಲ್ಲ.. ನಾನು ಮಯ್ಗಳ್ಳನೆಂದು ದಯವಿಟ್ಟು ಭಾವಿಸಬಾರದು. ನಾನೆಷ್ಟೇ ಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೂ, ನನ್ನಲ್ಲಿ ಜಾಸ್ತಿ ಮರಗಳನ್ನು ಕಡಿಯಲು ಸಾಧ್ಯವೇ ಆಗುತ್ತಿಲ್ಲ.”

ಅದಕ್ಕೆ ಸಾಹುಕಾರ “ ನನಗೆ ನಿನ್ನಲ್ಲಿ ನಂಬಿಕೆಯಿದೆ. ಆದರೆ ನೀನು ನಿನ್ನ ಕೊಡಲಿಯನ್ನು ಮಸೆದು ಹರಿತಗೊಳಿಸಿದ್ದು ಕೊನೆಯ ಬಾರಿ ಯಾವಾಗ?” . ಆಗ ವಾಸ್ತವಕ್ಕೆ ಬಂದ ಮರ ಕಡಿಯುವಾತ “ ಮಹಾಸ್ವಾಮಿ, ಹೌದು ನಾನು ಇದನ್ನು ಗಮನಿಸಿಯೇ ಇರಲಿಲ್ಲ. ಅಷ್ಟಕ್ಕೂ ನಾನು ಮರಕಡಿಯುವ ಕೆಲಸದಲ್ಲಿ ಅದೆಷ್ಟು ಮಗ್ನನಾಗಿದೇನೆಂದರೆ ನನಗೆ ನನ್ನ ಕೊಡಲಿಯನ್ನು ಮಸೆದು ಹರಿತಗೊಳಿಸಿಕೊಳ್ಳಬೇಕೆಂಬುದು ಹೊಳೆಯಲೇ ಇಲ್ಲ”.

ಹಿಂದೆ ಯಾವಾಗಲೋ ಕೇಳಿದ ಈ ಕಥೆ ಥಟ್ಟನೆ ನೆನಪಾಯ್ತು. ಈ ಕಥೆ ತುಂಬಾ ಪ್ರಸ್ತುತವೆನ್ನಿಸುತ್ತಿದೆ. ನಮ್ಮ ಜೀವನವೂ ಹೀಗೆಯೆ. ಈ ಓಟದಲ್ಲಿ ನಾವು ಅದೆಷ್ಟು ಬ್ಯುಸಿಯಾಗಿಬಿಡುತ್ತೇವೆಯೆಂದರೆ ನಾವು ನಮ್ಮ ಹರಿತವನ್ನೇ ಕಳೆದುಕೊಂಡರೂ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ.

ಈಗ ಹಿಂದೆಂದಿಗಿಂತಲೂ ನಮಗೆ ಪುರ್ಸೊತ್ತಿಲ್ಲ. ಸಿಕ್ಕಾಪಟ್ಟೆ ದುಡಿಯುವುದರಲ್ಲಿ ನಮ್ಮತನವೆಲ್ಲವನ್ನು ಮರೆತ ನಮ್ಮದು ಪ್ರೇತ ಸಾದೃಶ ಜೀವನವಾಗಿಬಿಟ್ಟದ್ದು ನಮಗೇ ತಿಳಿಯುವುದೇ ಇಲ್ಲ. ಅದೊಂದು ತೀರಾ ಮೌನದಲ್ಲಿ ನಡೆದು ಹೋಗುವ ಜೀವನದ ದುರಂತ. ಅದನ್ನು ದುರಂತವೆಂದು ಒಪ್ಪಿಕೊಳ್ಳಲು ನಾವು ಮನಸ್ಸೇ ಮಾಡುವುದಿಲ್ಲ.  ಅದ್ಯಾಕೆ ಹಾಗೆ ? ಹಾಗಂತ hard work ಮಾಡುವುದೇ ಅಪರಾಧವೆನ್ನುತ್ತಿಲ್ಲ. ಅದರಲ್ಲಿ ಏನೂ ತಪ್ಪಿಲ್ಲ. ಆದರೆ ನಮಗೆ ತೀರಾ ಅವಶ್ಯವಿರುವ, ನಮ್ಮವರು ನಮ್ಮಿಂದ ಬಯಸುವ ಕನಿಷ್ಠ ಪ್ರೀತಿಯ ಸಮಯವನ್ನು, ಮತ್ತು ಬಹುಮುಖ್ಯವಾಗಿ ನಮ್ಮ ಸ್ವಂತಿಕೆಗೆ ವ್ಯಯಿಸಲು ಸಮಯ ನಮ್ಮಗಿಲ್ಲವಾಗುವಂತೆ ವರ್ತಿಸುವುದಿದೆಯಲ್ಲ  ಅದು ನಾವು ಜೀವನದೊಂದಿಗೆ ನಡೆಸುವ ದೊಡ್ಡ ಅವ್ಯವಹಾರವೇ ಸರಿ.

ಹವ್ಯಾಸವನ್ನು , ನಮ್ಮತನವನ್ನು ಮರೆತು ಹರಿತವನ್ನು ಕಳೆದುಕೊಳ್ಳುವ ಮೊದಲು ಒಮ್ಮೆ ಅಲ್ಲೆಲ್ಲಿಯೋ ಕಳೆದುಹೋಗಿರುವ ಮಸೆಯುವ ಕಲ್ಲನ್ನು ಹುಡುಕಿ ನೋಡಿ. ಲೇಟ್ ಮಾಡ್ಬೇಡಿ.

– ಶಿಶಿರ ಹೆಗಡೆ

 

 

Advertisements

ನಮ್ಮ ದೇಶದ ಬೇಹುಗಾರಿಕೆ ಯಾವ ಜಮಾನದಲ್ಲಿದೆ…?

(ಈ ಲೇಖನ ಮಾರ್ಚ್ ೧೪ರ ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯ ಪೇಜ್ ನಲ್ಲಿ ಪ್ರಕಟವಾಗಿರುತ್ತದೆ)

ಅದು ೧೯೯೫ರಲ್ಲಿ ನಡೆದ ಒಂದು ಘಟನೆ. ಈಶಾನ್ಯ ಏಷ್ಯಾದ ದೇಶವೊಂದರಲ್ಲಿರುವ ಅಮೇರಿಕಾದ CIA ಕಚೇರಿಗೆ ಭೇಟಿ ಕೊಡುತ್ತಾನೆ ಒಬ್ಬ ಸಣ್ಣ ಕಣ್ಣಿನ ಚೈನಾದ ಮಧ್ಯ ವಯಸ್ಕ. ಒಂದು ಸೂಟ್ಕೇಸಿನಲ್ಲಿರುವ ಹಲವು ಕಾಗದಗಳನ್ನು CIA ಅಧಿಕಾರಿಗಳ ಕೈಗಿಡುತ್ತಾನೆ. ಅದನ್ನು ಎತ್ತಿ ನೋಡಿದ ಅಮೇರಿಕಾದ ಅಧಿಕಾರಿಗಳಿಗೆ ದೊಡ್ಡ ಆಶ್ಚರ್ಯವೇ ಎದುರಾಯಿತು. ಅಮೇರಿಕಾ ಯಾವ ವಿಚಾರವನ್ನು high secure – classified data (ಅತೀ ಸೂಕ್ಷ್ಮ ವಿಷಯ) ಎಂದು ಪರಿಗಣಿಸಿ ಅತೀ ಸುರಕ್ಷಿತವಾಗಿರಿಸಿತ್ತೋ ಅದಕ್ಕೆ ಸಂಬಂಧಿಸಿದ ಕಡತಗಳೇ ಅದರಲ್ಲಿ ಸಿಕ್ಕಿದ್ದವು. ಅದು ಅಮೇರಿಕಾದ ಅಂದಿನ ಅತ್ಯಾಧುನಿಕ ಟ್ರೈಡೆಂಟ್ ಜಲಾಂತರ್ಗಾಮಿಗಳು ಹೊಂದಿರುವ ಕ್ಷಿಪಣಿಗಳಿಗೆ ಸಂಬಧಿಸಿದ ವಿಚಾರ. ಅದನ್ನು ಆತ ಚೈನಾದಿಂದ ಕದ್ದು ತಂದು ಅಮೇರಿಕಾದವರ ಕೈಗಿಟ್ಟಿದ್ದ. ಇದು ಅಮೇರಿಕಾದ ರಕ್ಷಣಾ ವ್ಯವಸ್ಥೆಯನ್ನೇ ಅಣಕಿಸಿದಂತಾಯಿತು. ಅಲ್ಲಿಯವರೆಗೆ ಚೈನಾದ ಬೇಹುಗಾರಿಕೆಯನ್ನು ಅಷ್ಟಾಗಿ ಪರಿಗಣಿಸದ ಅಮೇರಿಕಾ ಆಗ ಮಾತ್ರ ಎಚ್ಚೆತ್ತುಕೊಳ್ಳಲೇಬೇಕಾಯಿತು. ಅಮೇರಿಕಾದ ಎಲ್ಲ ಅಧಿಕಾರಿಗಳು ಹಲವು ರೀತಿಯ ಪರೀಕ್ಷೆಗಳಿಗೆ, ವಿಚಾರಣೆಗಳಿಗೆ ಒಳಪಡಬೇಕಾಯಿತು. ಇದೆಲ್ಲದರ ಮಧ್ಯೆ ಆ ಕಡತಗಳನ್ನು ತಂದುಕೊಟ್ಟ ಆಸಾಮಿಯನ್ನೇ ಅನುಮಾನದಿಂದ ನೋಡಲು ಕಾರಣ ಆತ ಹೇಳಿದ ಕಥೆಯಾಗಿತ್ತು. “ನಾನು ಚೈನಾದ ಅಣು ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಹೀಗಾಗಿ ಆ ಸಂಬಂಧೀ ಅತೀ ಸೂಕ್ಷ್ಮ ಕಡತಗಳು ನನಗೆ ಸುಲಭದಲ್ಲಿ ಕೈಗೆಟಕುತ್ತಿದ್ದವು. ಒಂದು ರಾತ್ರಿ ನಾನು ಅದ್ಯಾರೂ ಇರದ ಸಂದರ್ಭದಲ್ಲಿ ನನ್ನ ಕಚೇರಿಗೆ ತೆರಳಿದೆ. ಅಲ್ಲಿನ ಅತೀ ಸೂಕ್ಷ್ಮವೆನಿಸುವ ಕಡತಗಳನ್ನೆಲ್ಲ ಬಾಚಿಕೊಂಡೆ. ಒಂದು ಚೀಲದಲ್ಲಿ ತುಂಬಿಕೊಂಡು ಅಲ್ಲಿನ ರಕ್ಷಣಾ ವ್ಯವಸ್ಥೆಯ ಕಣ್ಣು ತಪ್ಪಿಸಲು ಅದನ್ನು ಎರಡನೇ ಮಹಡಿಯಿಂದ ಕೆಳಕ್ಕೆಸೆದೆ. ಕೆಳಕ್ಕೆಸೆದಾಗ ಚೀಲ ಹರಿದು ಹೋಗಿತ್ತು. ಹಲವು ಕಡತಗಳು ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದವು. ಅವಸರ ಅವಸರದಲ್ಲಿ ಅದನ್ನು ಹರಿದ ಚೀಲಕ್ಕೇ ತುಂಬಿಕೊಂಡೆ. ಕೆಲವು ಅಲ್ಲೇ ಎಲ್ಲಿಯೋ ಹಾರಿ ಹೋಗುತ್ತಿದ್ದವು. ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ತಂದುಬಿಟ್ಟೆ”. ಕಥೆ ಏನೇ ಇರಲಿ , ಆದರೆ ಅಮೇರಿಕಾದ ಮಟ್ಟಿಗೆ ಅದು ಅರಗಿಸಿಕೊಳ್ಳಲಾಗದ ವಿಚಾರವೇ ಆಗಿತ್ತು. ಅಮೇರಿಕಾದ ಬೇಹುಗಾರಿಕೆ ಅದೆಷ್ಟೇ ಅದ್ಭುತವಾಗಿ ಹೊರ ದೇಶಗಳಲ್ಲಿ ಮತ್ತು ಚೈನಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ , ಚೈನಾದ ಬೇಹುಗಾರಿಕೆಯ ಕೈಚಳಕವನ್ನು ತನ್ನ ನೆಲದಲ್ಲಿ ತಡೆಯಲು ಸಂಪೂರ್ಣವಾಗಿ ಸೋತದ್ದು ಆಗ ಅರಿವಿಗೆ ಬಂತು. ಆಗ ಅಮೇರಿಕಾಕ್ಕೆ counterintelligence ನ ಬಗ್ಗೆ ತೋರಿದ ಆಲಸ್ಯಕ್ಕೆ ತೆತ್ತ ಬೆಲೆ ಅರ್ಥವಾಯಿತು. ಈ ಘಟನೆಯಾದ ನಂತರ ಹಾಲಿವುಡ್ಡಿನಲ್ಲಿ ಇದೇ ವಿಷಯದ ಮೇಲೆ ಮತ್ತು ಚೈನಾ , ರಷ್ಯಾದ ಏಜೆಂಟರುಗಳನ್ನಾಧರಿಸಿ ಹಲವು ಚಲನಚಿತ್ರಗಳು ನಿರ್ಮಾಣವಾದವು. ಅಮೇರಿಕನ್ನರು ತಮ್ಮ ದೇಶದಲ್ಲಿ ಕಾಣಿಸಿಕೊಳ್ಳುವ ಎಲ್ಲ ಸಣ್ಣ ಕಣ್ಣಿನವರನ್ನು ಚೈನಾದ ಬೇಹುಗಾರರೇ ಇರಬಹುದೇನೋ ಎಂದು ಅನುಮಾನದಿಂದ ನೋಡಲು ಶುರುವಿಟ್ಟುಕೊಂಡರು. ಇವತ್ತಿಗೂ ಅಮೇರಿಕಾಕ್ಕೆ ಚೈನಾ ಮತ್ತು ರಷ್ಯಾದ ಬೇಹುಗಾರಿಕೆ ಒಂದು ಕಂಸ ಸ್ವಪ್ನವೇ.

ಆದರೆ ಭಾರತೀಯರಾದ ನಾವು ಇಲ್ಲಿ ಗಮನಿಸಬೇಕಾದದ್ದು ಬೇರೆಯೇ ಇದೆ – ಕಲಿಯಬೇಕಾದದ್ದು ಬಹಳವಿದೆ. ನಮ್ಮ ದೇಶದ ಮಟ್ಟಿಗೆ ಗಡಿಕಾಯುವುದೇ ಒಂದು ತಲೆನೋವಿನ ಕೆಲಸ. ಏಕೆಂದರೆ ನಮ್ಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡಲು ಸದಾ ಹವಣಿಸುತ್ತಿರುವ ಪಾಕಿಸ್ತಾನ ನಮ್ಮ ಪಕ್ಕದ ಮನೆ. ಪಾಕಿಸ್ತಾನದ ಬೇಹುಗಾರರಿಗೆ ಮತ್ತು ಭಯೋತ್ಪಾದಕರಿಗೆ ಭಾರತ ಹೊಕ್ಕಲು ಸುಲಭದ ದಾರಿಯೆಂದರೆ ಇನ್ನೊಂದು ಮಗ್ಗುಲಿನಲ್ಲಿರುವ ಬಾಂಗ್ಲಾದೇಶ. ತನ್ನನ್ನು ತಾನೇ ನಿಭಾಯಿಸಿಕೊಳ್ಳಲು ಸಾಧ್ಯವಾಗದ ಬಾಂಗ್ಲಾದೇಶ ಭಾರತದ ಒಳನುಗ್ಗುವ ನುಸುಳುಕೋರರನ್ನು ಹೇಗೆ ತಾನೆ ತಡೆ ಹಿಡಿದೀತು? ಹೀಗಾಗಿ ಬಾಂಗ್ಲಾದೇಶವನ್ನು ಜರೆಯುವುದಕ್ಕಿಂತ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಪ್ರಶ್ನಿಸಿಕೊಳ್ಳುವುದೇ ಉತ್ತಮ. ಬಾಂಗ್ಲಾ ದೇಶದ್ರೋಹಿಗಳ ಮಟ್ಟಿಗೆ ಭಾರತದೊಳಕ್ಕೆ ತೂರಿಕೊಳ್ಳಲು ತೆರೆದ ಬಾಗಿಲು. ಇದಕ್ಕೆ ಹಿಂದಿನ ತಿಂಗಳು ದೆಹಲಿಯಲ್ಲಿ ಸಿಕ್ಕಿಬಿದ್ದ ನಕಲಿ ನೋಟನ್ನು ಹೊತ್ತ ವಾಹನವೇ ಉದಾಹರಣೆ. ಆ ವಾಹನದಲ್ಲಿ ಸಿಕ್ಕ ನಕಲಿ ನೋಟು ಬರೋಬ್ಬರಿ ಆರು ಕೋಟಿ ರೂಪಾಯಿ. ಅದು ದೇಶದಲ್ಲಿ ಚಲಾವಣೆಗೊಂಡರೆ ಭಾರತಕ್ಕೆ ಅದರಿಂದ ಆಗುವ ನಷ್ಟ ಆರು ಕೋಟಿಗಿಂತ ಹೆಚ್ಚಿಗೆ. ನಮ್ಮ ದೇಶ ಮನೆಯೊಂದು ಹಲವು ಬಾಗಿಲು. ಇಲ್ಲಿಗೆ ಕಸಬ್ ನಂತಹ ಪಾಕಿಸ್ತಾನಿ ಅತೀ ಸುಲಭವಾಗಿ ಒಂದು ಚಿಕ್ಕ ಹಡಗಿನಲ್ಲಿ ನಮ್ಮ ಯಾವುದೇ ಬೇಹುಗಾರಿಕೆಗೂ ಸುಳಿವಿಲ್ಲದಂತೆ ಬಂದೂಕು ಹಿಡಿದು ಒಳಗೆ ನುಸುಳಿಬಿಡುತ್ತಾನೆ. ಇನ್ಯಾರೋ ಭಯೋತ್ಪಾದಕ, ದೇಶದ ತೀರಾ ದಕ್ಷಿಣಕ್ಕೆ ಬಂದು ಒಂದು ಬಾಂಬ್ ಉಡಾಯಿಸಿ ಕಣ್ಮರೆಯಾಗುತ್ತಾನೆ. ಬಾಂಬ್ ಇಟ್ಟವರ್ಯಾರು ಎಂದು ನಮ್ಮ ವ್ಯವಸ್ಥೆ ಕಂಡುಹಿಡಿಯುವ ಹೊತ್ತಿಗೆ ಆತ ತಣ್ಣಗೆ ಪಾಕಿಸ್ತಾನದಲ್ಲಿ ಇನ್ನೊಂದು ಅನಾಹುತಕ್ಕೆ ನಕ್ಷೆ ತಯಾರು ಮಾಡುತ್ತಿರುತ್ತಾನೆ. ನಮ್ಮ ಸರಕಾರ ಪಾಕಿಸ್ತಾನ ಸಹಕರಿಸುತ್ತಿಲ್ಲವೆಂದು ಜಗತ್ತಿನ ಎಲ್ಲ ದೇಶಗಳೆದುರು ಕಣ್ಣೀರಿಡಲು ಶುರುವಿಟ್ಟಿಕೊಳ್ಳುತ್ತದೆ. ಕೆಲ ದೇಶಗಳು ನಮ್ಮ ಕಣ್ಣೀರು ಒರೆಸಿದಂತೆ ನಟಿಸುತ್ತವೆ. ಪದೇ ಪದೆ ಚಿಕ್ಕ ಚಿಕ್ಕ ವಿಚಾರಕ್ಕೆ ಅಳುವ ಮಗುವನ್ನು ಸ್ವತ: ತಾಯಿಯೇ ಸಮಾಧಾನ ಮಾಡುವುದನ್ನು ನಿಲ್ಲಿಸುವ ಈ ಕಾಲದಲ್ಲಿ ಯಾವ ದೇಶ ತಾನೆ ನಮಗೆ ಏನು ಒಳ್ಳೇದು ಮಾಡೀತು. ಪ್ರತಿಯೋಂದು ದೇಶಕ್ಕೆ ಅದರದೇ ಆದ ಸಮಸ್ಯೆಗಳಿರುತ್ತವೆ. ರಕ್ಷಣಾ ವಿಚಾರವಾಗಿ ಭಾರತ ಇಷ್ಟು ಬಲಿಷ್ಟ ದೇಶವಾಗಿ ಪದೇ ಪದೆ ಮತ್ತೊಂದು ದೇಶದ ಸಹಾಯ ಬೇಡುವುದು ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರವಲ್ಲವೇ? ಇವೆಲ್ಲ ನಾಟಕಗಳು ಜನಸಾಮಾನ್ಯರಾದ ನಮ್ಮ ನಡುವೆ ನಡೆಯುತ್ತಲೇ ಇದ್ದರೂ ನಾವು ಎಲ್ಲವನ್ನು ಮರೆತು ಸಹಜಕ್ಕೆ ಮರಳುತ್ತೇವೆ, ಮತ್ತೊಂದು ದುರಂತಕ್ಕೆ ಅಣಿಯಾಗುವಂತೆ. ನಮ್ಮ ದೇಶ ವಿಸ್ತೀರ್ಣದಲ್ಲಿ ಜಗತ್ತಿನಲ್ಲಿ ಏಳನೇ ದೊಡ್ಡ ದೇಶ. ನಾವು ೧೫,೧೦೬.೭೦ ಕಿ.ಮಿ. ಉದ್ದದ ಗಡಿಯನ್ನು ಬಾಂಗ್ಲಾ, ಪಾಕಿಸ್ತಾನ, ಚೈನಾ, ನೇಪಾಳ, ಮಯನ್ಮಾರ್, ಭೂತಾನ್ ದೇಶಗಳೊಂದಿಗೆ ಹಂಚಿಕೊಳ್ಳುತ್ತೇವೆ. ಪಾಕಿಸ್ತಾನ ನಮ್ಮ ದೇಶದ ಸ್ವಾಸ್ಥ್ಯವನ್ನು ಹಾಳುಗೆಡುಹುವುದರಲ್ಲಿ ಸದಾ ಕಾರ್ಯಪ್ರವ್ರತ್ತವಾಗಿರುತ್ತದೆ. ಹೀಗಿರುವಾಗ ಸಮಸ್ಯೆ ಸಹಜ ಮತ್ತು ಸಹಜವಾಗಿ ಪ್ರತಿಬೇಹುಗಾರಿಕೆ ಕಠಿಣದ ಕೆಲಸ. ನಮ್ಮ ಮಟ್ಟಿಗೆ counterintelligence ಮತ್ತು counterterrorism ಇವೆರಡೂ ಒಂದೇ. ಹೀಗಿರುವಾಗ ಇಲ್ಲಿನ ಸಮಸ್ಯೆಯನ್ನು ಯಾವುದೇ ಬೇರೆ ದೇಶಕ್ಕೆ ಹೋಲಿಸಿ ನೋಡಲು ಸಾಧ್ಯವಿಲ್ಲ ಅಥವಾ ಸಮಸ್ಯೆಗೆ ಪರಿಹಾರವನ್ನು ಬೇರೇ ದೇಶದ ವ್ಯವಸ್ಥೆಯಿಂದ ನೇರವಾಗಿ ಅಳವಡಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದರೆ ಪರಿಹಾರ ಕೂಡ unique ಆಗಿರಲೇ ಬೇಕು ಅಲ್ಲವೇ? ಯಾವುದೇ ದೇಶದ ರಕ್ಷಣಾ ವ್ಯವಸ್ಥೆ ಕೇವಲ ಸೈನಿಕರಿಗೆ ಗಡಿಕಾಯುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಒಂದು ಸದೃಢ ಬೇಹುಗಾರಿಕೆ(intelligence) ಮತ್ತು ಪ್ರತಿಬೇಹುಗಾರಿಕೆ(counterintelligence – ಬೇರೆ ದೇಶ ನಮ್ಮ ದೇಶದಲ್ಲಿ ಬೇಹುಗಾರಿಕೆ ನಡೆಸುವುದನ್ನು ತಡೆಗಟ್ಟುವುದು) ದೇಶದ ಮಟ್ಟಿಗೆ ಅತೀ ಅವಷ್ಯ. ಇಂದಿನ ದಿನಗಳಲ್ಲಿ ನಮ್ಮಲ್ಲಿ ಈ ವ್ಯವಸ್ಥೆಯೇ ಬಹುವಾಗಿ ಪ್ರಶ್ನಿಸಲ್ಪಡುತ್ತಿದೆ.

ಪ್ರತಿಯೊಂದು ದುರ್ಘಟನೆಯಾದಾಗಲೂ ನಮ್ಮ ಮಾಧ್ಯಮಗಳು ನಮ್ಮ ಬೇಹುಗಾರಿಕಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಬಂದಿವೆ. ಇದೇ ಪ್ರಶ್ನೆಯನ್ನು ಮಾಧ್ಯಮ ಮುಂಬೈ ಸ್ಪೋಟವಾದಾಗ ಮುಂದಿಟ್ಟರೆ ಅದಕ್ಕೆ ಉತ್ತರಿಸುವ ರಾಹುಲ್ ಗಾಂಧಿ , ೧೦೦ ಪ್ರತಿಶತ ಇಂಥಹ ಘಟನೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲವೆಂದು ಹೇಳಿಬಿಟ್ಟದ್ದು ಇನ್ನೂ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ. ಇದು ನಿಜವೇ ಇರಬಹುದು, ಆದರೆ ಅದನ್ನು ಒಪ್ಪಿಕೊಳ್ಳುವುದೇ ದಾರಿ ಎಂಬ ರಾಹುಲ್ ದಾಟಿ ಬಹಳ ಖೇದಕರ. ಅದರಲ್ಲಿಯೂ ದೇಶದ ಮುಂದಿನ ಪ್ರಧಾನಿಯೆಂದೇ ಕಾಂಗ್ರೆಸ್ಸಿನಿಂದ ಬಿಂಬಿಸಲ್ಪಟ್ಟ ಒಬ್ಬ ವ್ಯಕ್ತಿ ಈ ಮಾತನ್ನು ಆಡಿದ್ದು ಬಹುವಾಗಿಯೇ ಟೀಕೆಗೆ ಒಳಪಟ್ಟಿತು. ಕ್ರಿಕೆಟ್ಟಿನಲ್ಲಿ ಬ್ಯಾಟ್ಸ್ಮ್ಯಾನ್ ಹೊಡೆದ ಬಾಲ್ ಅನ್ನು ಹಿಡಿಯುವಾಗ ಫಿಲ್ಡರ್ ನ ಸರಿ ಹಿಂದೆ ಇನ್ನೊಬ್ಬ ಫೀಲ್ಡರ್ ನಿಂತುಕೊಳ್ಳುವುದನ್ನು ಕಾಣುತ್ತೇವೆ. ಒಂದೊಮ್ಮೆ ಮೊದಲ ಫೀಲ್ಡರ್ ಬಾಲ್ ಅನ್ನು ಬಿಟ್ಟರೆ ಅದನ್ನು ಅವನ ಹಿಂದೆ ನಿಂತ ಫೀಲ್ಡರ್ ಹಿಡಿಯಬೇಕಾಗುತ್ತದೆ. ಅದು ಬ್ಯಾಕ್ ಅಪ್ ಕವರ್. ಬ್ಯಾಕಪ್ ಕವರ್ ಸರಿಯಾಗಿ ಇಲ್ಲದೇ ಹೋದಲ್ಲಿ ಅಲ್ಲೊಂದು ವೈಫಲ್ಯ ಕಟ್ಟಿಟ್ಟ ಬುತ್ತಿ. ಬ್ಯಾಕಪ್ ಇರದೇ ಹೋದಲ್ಲಿ ಮೊದಲ ಫೀಲ್ಡರ್ ಅನ್ನು ತೆಗಳಿ ಪ್ರಯೋಜನವೊಂಟೇ? ಈ ಬ್ಯಾಕ್ ಅಪ್ ನ ಕೆಲಸ ಆಂತರಿಕ ಬೇಹುಗಾರಿಕೆಯ ಹೊಣೆ. ಹಾಗೆ ನೋಡಿದರೆ ನಮ್ಮಲ್ಲಿಯೂ ಸದೃಢವಾದ ಬೇಹುಗಾರಿಕೆಯಿದೆ ಎಂಬುದನ್ನು ಒಪ್ಪಿಕೊಳ್ಳೋಣ ಆದರೆ ಅದು ಇಂದಿನ ಜಮಾನಾದಲ್ಲಿ ’ಸಾಕಷ್ಟು’ ಸದೃಢ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕೆ ಒಂದು ಚಿಕ್ಕ ಅಣಕು ನಮ್ಮದೇ ಬೆಂಗಳೂರಿನಲ್ಲಿ ೨೦೦೮ರಲ್ಲಿ ನಡೆದ ಸರಣಿ ಸ್ಪೋಟ. ಅದಕ್ಕೆ ತಲೀಮು ನಡೆಸಿದ್ದು ಇಲ್ಲಿಯೇ. ಆದರೆ ಹೀಗೊಂದು ಘಟನೆ ಸಂಭವಿಸುವ ಯಾವುದೇ ಸುಳುಹು ಯಾವುದೇ ಬೇಹುಗಾರಿಕಾ ಸಂಸ್ಥೆಗಳಿಗೆ ಇರಲೇ ಇಲ್ಲ. ಸಾವು ನೋವಿನ ಗಣನೆಯಲ್ಲಿ ದೇಶ ಕಂಡ ಬಾಕಿ ಸ್ಪೋಟಗಳಿಗೆ ಹೋಲಿಸಿದರೆ ಅದೊಂದು ಸಣ್ಣ ಘಟನೆ ಎಂದು ಹೇಳಿಕೊಳ್ಳಬಹುದು, ಆದರೆ ದೇಶದ ದಕ್ಷಿಣದಲ್ಲಿರುವ ಬೆಂಗಳೂರಿನಲ್ಲಿ ಇಷ್ಟು ವ್ಯವಸ್ಥಿತವಾಗಿ ಸ್ಪೋಟ ನಡೆದದ್ದು ಬೇಹುಗಾರಿಕೆಯ ವೈಫಲ್ಯವಲ್ಲದೇ ಇನ್ನೇನು? ಬೇಹುಗಾರಿಕೆಯಿಂದ ಮಾತ್ರ ಇವನ್ನೆಲ್ಲ ತಡೆಹಿಡಿಯಲು ಸಾಧ್ಯವೇ ವಿನಹ ಕೇವಲ ರಾತ್ರಿ ಹಗಲು ಪೋಲೀಸ್ ಪಹರೆಯಿಂದ ಈ ಥರಹದ ಘಟನೆಗಳನ್ನು ಎಷ್ಟರ ಮಟ್ಟಿಗೆ ತಡೆಯಲು ಸಾಧ್ಯ? ಈ ಘಟನೆ ನಡೆದಾದ ಕೂಡಲೆ ಬೆಂಗಳೂರಿನಲ್ಲಿ ಎಲ್ಲಿಲ್ಲದ ಭದ್ರತೆಗಳು ಕಂಡುಬಂದವು. ಮಜೆಸ್ಟಿಕ್ ನಲ್ಲಿ, ಸೆಟಲೈಟ್ ಬಸ್ ನಿಲ್ದಾಣಗಳಲ್ಲಿ, ಶಾಪಿಂಗ್ ಮಾಲ್ ಗಳಲ್ಲಿ ಹೀಗೆ ಜನರು ಸೇರುವಲ್ಲೆಲ್ಲ ಲೋಹ ಶೋಧಕಗಳನ್ನು ಅಳವಡಿಸಲಾಯಿತು. ಆದರೆ ಅವು ಕಾರ್ಯ ನಿರ್ವಹಿಸಿದ ದಿನಗಳೆಷ್ಟು? ಈಗಲೂ ಲೋಹ ಶೋಧಕಗಳೇನೋ ಅಲ್ಲಿಯೇ ಇವೆ, ಆದರೆ ಎಲ್ಲರೂ ಅದರ ಒಳಗೆ ನಡೆಯದೇ ಪಕ್ಕದಲ್ಲಿ ಹಾದು ಹೋಗುವುದು ಸಹಜವಾಗಿದೆ. ಇಂದು ಮಳ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲೇನೋ ಎಲ್ಲರನ್ನೂ ತಪಾಸಣೆ ಮಾಡಿ ಒಳಬಿಡುತ್ತಾರೆ , ಆದರೆ ಉಳಿದ ಚಿತ್ರಮಂದಿರಗಳಲ್ಲಿ ? ಇಂಥಹ ಚಿತ್ರಮಂದಿರದಲ್ಲಿ ಇವತ್ತು ಯಾವುದೇ ಭಯೋತ್ಪಾದಕ , ಯಾವುದೇ ತಾಲೀಮಿಲ್ಲದೇ ಅರಾಮವಾಗಿ ಬಾಂಬ್ ಅನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ಇಟ್ಟುಬರಬಹುದು. ಇದೊಂದು ಚಿಕ್ಕ ಉದಾಹರಣೆಯಷ್ಟೆ. ಜನಸಾಮಾನ್ಯ ಮಾತ್ರ ಇದಕ್ಕೆಲ್ಲ ತಲೆಯೇ ಕೆಡಿಸಿಕೊಂಡಂತಿಲ್ಲ.

ಇವತ್ತಿಗೂ ನಮ್ಮಲ್ಲಿಯ ಬೇಹುಗಾರಿಕಾ ಸಂಸ್ಥೆಗಳ ಅಂಗ ಸಂಸ್ಥೆಗಳನ್ನು ನೋಡಿದರೆ ಅದು ರಚನೆಯಾದಾಗಿನ ನಂತರ ಹೆಚ್ಚು ಬದಲಾವಣೆಯಾದಂತಿಲ್ಲ. ಆಗ ಇರುವ ಅಂಗ ಸಂಸ್ಥೆಗಳು ಇನ್ನೂ ಹಾಗೆಯೇ ಇವೆ. ಅವುಗಳಲ್ಲಿ ಕೆಲವಕ್ಕೆ ಕೆಲಸವೇ ಇದ್ದಂತಿಲ್ಲ, ಅಲ್ಪಮಟ್ಟಿಗಿದ್ದರೂ ಮೊದಲಿನ ಥರಹದ ಕೆಲಸವಿಲ್ಲ. ಈಗಲೂ ಅರವತ್ತರ ದಶಕದ ಮಾದರಿಯೇ ಉಳಿದುಕೊಂಡಿದೆ ಎನ್ನುವುದೇ ಇಂದು ಆತಂಕಕ್ಕೆ ಕಾರಣವಾಗಿದೆ. ಬೇಹುಗಾರಿಕಾ ಸಂಸ್ಥೆಯ ಅಂಗ ಸಂಸ್ಥೆಗಳಲ್ಲೊಂದು, All India Radio Monitoring Service. ದೇಶದ ಒಳಗೆ ಹಾಯುವ ಎಲ್ಲ ರೇಡಿಯೋ ಅಲೆಗಳ ಮೇಲೆ ನಿಗಾವಹಿಸುವುದೇ ಈ ಸಂಸ್ಥೆಯ ಕೆಲಸ. ೬೦-೭೦ ರ ದಶಕದಲ್ಲಿ ರೇಡಿಯೋ ಅಲೆಗಳನ್ನು ದೇಶದ್ರೋಹದ ಕೆಲಸಕ್ಕೆ ಹೆಚ್ಚಾಗಿ ಬಳಸಲ್ಪಡುತ್ತಿತ್ತು. ಆದರೆ ಇಂದಿನ ಯುಗದಲ್ಲಿ ಇದನ್ನು ಅಷ್ಟಾಗಿ ಭಯೋತ್ಪಾದಕರೂ ಬಳಸುತ್ತಿಲ್ಲ, ಕಾರಣ ಅದನ್ನೆಲ್ಲ ಮೀರಿದ ತಂತ್ರಜ್ನಾನ ಸುಲಭದಲ್ಲಿ ಲಭ್ಯವಿದೆ. ಇಂಟರ್ನೆಟ್ ನ ಮುಂದೆ ಕೂತರೆ ನೂರು ರೀತಿಯಲ್ಲಿ ನಮಗೆ ಬೇಕಾದ ಸಂದೇಶವನ್ನು ಜಗತ್ತಿನ ಯಾವುದೇ ಇನ್ನೊಬ್ಬನಿಗೆ ರವಾನಿಸಬಹುದು. ಭಯೋತ್ಪಾದಕರು ಕೂಡ ಬಳಸುತ್ತಿರುವುದು ಅದನ್ನೇ. ಆದರೆ ಇದೆಲ್ಲವುದನ್ನು ತಡೆಯಲು ಯಾವುದೇ ಸಮರ್ಪಕ ವ್ಯವಸ್ಥೆ ನಮ್ಮಲ್ಲಿದೆಯೇ? ನಮ್ಮಲ್ಲಿನ cyber crime & cyber intelligence ಅದೆಷ್ಟು ಸುಸಜ್ಜಿತ ? ಬೇಹುಗಾರಿಕಾ ಸಂಸ್ಥೆಗಳಲ್ಲಿ ಅದೇ ಹಳೆಯ ತಂತ್ರಜ್ನಾನವಿರುವುದನ್ನು ಚಿದಂಬರಂ ಸಹ ಅಲ್ಲಗಳೆದಿಲ್ಲ. ಇನ್ನು ಪ್ರತಿಬೇಹುಗಾರಿಕೆಯಲ್ಲೂ ಅದೇ ಕಥೆ. ಇಂದು ನಮ್ಮ ಯಾವುದೇ ಶತ್ರು ರಾಷ್ಟ್ರಗಳು ಭಾರತದ ಒಳಗೆ ಹೊಕ್ಕು ಬೇಹುಗಾರಿಕೆ ನಡೆಸುವ ಅಗತ್ಯವೇ ಇಲ್ಲ. ಅಂತರ್ಜಾಲ ಬೇಹುಗಾರಿಕೆ ಮತ್ತು ಅಂತರ್ಜಾಲ ಭಯೋತ್ಪಾದನೆ ಬಹುವಾಗಿ ಎಲ್ಲ ದೇಶವನ್ನೂ ಕಾಡುತ್ತಿವೆ. ಇದರಿಂದ ಅತೀ ಹೆಚ್ಚು ಸಂಕಷ್ಟ ಎದುರಿಸುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಕಳೆದ ವರ್ಷ , ೧೫ನೇ ಅಗಷ್ಟ್ ನಲ್ಲಿ ನಡೆದ ಒಂದು ಘಟನೆ ನಮ್ಮಲ್ಲಿ ಬಹು ಜನರಿಗೆ ತಿಳಿದಂತಿಲ್ಲ. ಅಂದು ಕೆಲ ಪಾಕಿಸ್ತಾನೀ ವಿಧ್ವಂಸಕ ಹ್ಯಾಕರ್ ಗಳು ಭಾರತದ ಕಾನೂನಿಗೆ ಸಂಬಂಧಿಸಿದ ವೆಬ್ ಸೈಟ್ ಒಂದರಲ್ಲಿ ಒಂದು ಐ.ಪಿ.ಸಿ. ಯನ್ನೇ ಬದಲಾಯಿಸಿಬಿಟ್ಟಿದ್ದರು. “Indian Penal Code (ACT No. 45 of 1869) Chapter 2, sec 18 : India. India means the territory of India excluding the State of Jammu and Kashmir” ಎಂದು ಬದಲಾಯಿಸಲ್ಪಟ್ಟಿತ್ತು. ಇದರಿಂದ ಕಾಷ್ಮೀರವೇನು ಪಾಕಿಸ್ತಾನದ ಪಾಲಾಗಿಬಿಡೊಲ್ಲ ಅಥವಾ ದೇಶಕ್ಕ ಏನೂ ಹಾನಿಯಾಗಿಲ್ಲ, ಆದರೆ ಈ ಮೂಲಕ ಭಯೋತ್ಪಾದಕರು ನಮಗೆ ಕಳುಹಿಸಿ ಕೊಟ್ಟ ಸಂದೇಶವೇನು ಅರ್ಥವಾಯಿತಲ್ಲ ? ನಮ್ಮಲ್ಲಿ ಈಗಾಗಲೇ ಬಹುತೇಕ ಕಡತಗಳು, ಮಾಹಿತಿಗಳು ಮತ್ತು ವ್ಯವಹಾರಗಳು ಗಣಕೀಕ್ರತಗೊಂಡಿವೆ. ಈ ಸಂದರ್ಭದಲ್ಲಿ ಯೋಗ್ಯವಾದ ಭದ್ರತಾ ಅಂಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ದೇಶದ ಗೌಪ್ಯ ವಿಚಾರಗಳನ್ನೆಲ್ಲ ಅದೆಲ್ಲಿಯೋ ಕೂತ ಭಯೋತ್ಪಾದಕನೊಬ್ಬ ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದಾದ ಎಲ್ಲ ಆತಂಕಗಳೂ ಇವೆ. ಇಂದಿನ ಆಧುನಿಕತೆಯ ಮಧ್ಯೆ ನಾವೆಷ್ಟು ಸಮರ್ಥರು ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತಲೇ ಇದೆ. ಇಂದು ಸುಮ್ಮನೆ ಒಂದು ಸರಕಾರೀ ವೆಬ್ ಸೈಟ್ ನ ಮೇಲೆ ಕಣ್ಣು ಹಾಯಿಸಿದರೆ , ಅದರಲ್ಲಿ ಬಳಕೆಯಾದ ತಂತ್ರಜ್ನಾನ ಅದೆಷ್ಟು ಹಿಂದಿನದೆಂಬುದು ತಿಳಿಯುತ್ತದೆ. ಅಲ್ಲಿಯ ಚಿತ್ರಗಳು ಮತ್ತು ಬಟನ್ನುಗಳು ಎಲ್ಲೆಲ್ಲಿಯೋ ಯರ್ರಾಬಿರ್ರಿಯಾಗಿ ಹರಡಿಕೊಂಡಿರುತ್ತವೆ. ಒಂದು ಬಟನ್ನು ಕೆಲಸ ಮಾಡಿದರೆ ಇನ್ನೊಂದು ಕೆಲಸಮಾಡುತ್ತಿರುವುದಿಲ್ಲ. ಹೀಗಿರುವಾಗ ಅದರ ಹಿಂದೆ ಅಡಗಿಕೊಂಡ ಅದೆಷ್ಟೋ ಮಹತ್ವಪೂರ್ಣ ಗೌಪ್ಯ ಮಾಹಿತಿಗಳು ಅದೆಷ್ಟು ಸುರಕ್ಷಿತವೆನ್ನುವ ಪ್ರಶ್ನೆ ಮತ್ತೆ ಮುಂದಕ್ಕೆ ಬಂದು ನಿಲ್ಲುತ್ತದೆ. ಜಗತ್ತಿನ ಐ.ಟಿ. ತಂತ್ರಜ್ನಾನದಲ್ಲಿ ಮುಂಚೂಣಿಯಲ್ಲಿರುವ, ಅಗಾಧ ಜ್ನಾನ ಮತ್ತು ಪ್ರವೀಣ್ಯತೆಯಿರುವ ಅತೀ ಹೆಚ್ಚು ಇಂಜಿನೀಯರುಗಳಿರುವ ದೇಶ ಅದ್ಯಾಕೆ ತನ್ನಲ್ಲಿನ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲವೆಂಬ ಪ್ರಶ್ನೆಗೆ ಇಂದಿನ ರಾಜಕಾರಣಿಗಳ ಓಬೀರಾಯನ ಕಾಲದ ಆಡಳಿತ ವೈಖರಿ ಮತ್ತು ವಿಚಾರಗಳೇ ಕಾರಣವೆಂಬುದು ಉತ್ತರವೇ ? ಒಟ್ಟಾರೆಯಾಗಿ, ಬದಲಾವಣೆಗೆ ಸರಿಯಾಗಿ ಒಗ್ಗಿಕೊಳ್ಳದ ವ್ಯವಸ್ಥೆ ಯಾವತ್ತೂ ಸದೃಢವಾಗಿ ಬದುಕಿಲ್ಲವೆಂಬುದನ್ನು ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರಬೇಕು. ಇನ್ನಾದರೂ ಈ ನಿಟ್ಟಿನಲ್ಲಿ ಎಚ್ಚರವಹಿಸಿ ಮುನ್ನಡೆಯಬೇಕಾಗಿದೆ. ಇಲ್ಲವಾದಲ್ಲಿ ೧೯೯೫ ರ ಅಮೇರಿಕಾ ಮಾಡಿದ ತಪ್ಪನ್ನೇ ನಾವು ಇಂದು ಮಾಡಿ ಕುಳಿತುಕೊಳ್ಳಬೇಕಾಗುತ್ತದೆ. ಹಾಗೊಮ್ಮೆ ನಮ್ಮ ಯಾವುದೇ ಗೌಪ್ಯ ಮಾಹಿತಿಗಳು ಪಾಕಿಸ್ತಾನದ ಕೈಗೇನಾದರೂ ಸಿಕ್ಕರೆ, ಅಮೇರಿಕಾಕ್ಕೆ ಚೈನಾದಿಂದ ಆದ ನಷ್ಟದ ನೂರುಪಟ್ಟು ನಷ್ಟ ನಾವು ಅನುಭವಿಸಬೇಕಾದೀತು.

ಇದೆಲ್ಲದರ ನಡುವೆ , ರಾಷ್ಟ್ರದ ಆಂತರಿಕ ಭದ್ರತೆಯನ್ನು ಕಾಪಿಡುವಲ್ಲಿ ಪ್ರಜೆಗಳಾದ ನಮ್ಮ ಪಾತ್ರದ ಅರಿವು ನಮಗಿದ್ದಂತಿಲ್ಲ. ನಮ್ಮಲ್ಲಿ ಬರುವ ಯಾವುದೇ ವ್ಯಕ್ತಿಯನ್ನು ನಾವು ಬಹಳ ಲಘುವಾಗಿಯೇ ಪರಿಗಣಿಸಿಬಿಡುತ್ತೇವೆ. ಹಿಂದೆ ಮುಂದೆ ನೋಡದೆ ಒಳ್ಳೆಯ ಬಾಡಿಗೆ ಬಂದರಾಯಿತೆಂದು ಯಾರ್-ಯಾರಿಗೋ ಮನೆಯನ್ನು ಬಾಡಿಗೆಗೆ ಇಟ್ಟುಬಿಡುತ್ತೇವೆ. ನಮ್ಮೊಳಗೊಬ್ಬ ಭಯೋತ್ಪಾದಕನಿದ್ದ ಎಂದು ಒಂದು ಅವಘಡವಾದಾಗ ಮಾತ್ರ ನಮಗೆ ತಿಳಿಯುತ್ತದೆ. ಪ್ರಜೆಗಳಾದ ನಾವು ಅದೆಲ್ಲಿಯೋ ಎಡವಿ ಯಡವಟ್ಟುಗಳಿಗೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಕಾರಣವಾದ ಉದಾಹರಣೆಗಳು ಸಾಕಷ್ಟಿವೆ. ನಮ್ಮಲ್ಲಿ ಹೊರಗಿಂದ ಬರುವ ಯಾವುದೇ ದೇಶದ್ರೋಹಿ ಕಾನೂನಿನಿಂದ ತಪ್ಪಿಸಿ ಕಣ್ಮರೆಯಾಗುತ್ತಾನೆ, ಆದರೆ ಜನಸಾಮನ್ಯನ ಕಣ್ಣಿಂದಾಚೆ ತಪ್ಪಿಸಿಕೊಳ್ಳಲು ಅಷ್ಟು ಸುಲಭ ಸಾಧ್ಯವಿಲ್ಲ. ಆದರೆ ನಮಗೆ ಯಾವುದೇ ವ್ಯಕ್ತಿಯ ಮೇಲೆ ಅನುಮಾನ ಬಂದರೆ ಸುಮ್ಮನೆ ನಮಗ್ಯಾಕೆ ಉಸಾಬರಿಯೆಂದು ಮೌನ ವಹಿಸಿಬಿಡುತ್ತೇವೆ. ಪರೋಕ್ಷವಾಗಿ ನಮ್ಮ ಪರಿಸರ ಹದಗೆಡಲು ಹಲವುಬಾರಿ ಜನಸಾಮಾನ್ಯರಾದ ನಾವೇ ಕಾರಣರಾಗಿಬಿಡುತ್ತೇವೆ. ಇದೇ ಕಾರಣಕ್ಕೆ ಅಲ್ಲೊಂದು ಸರಣಿ ಸ್ಪೋಟ ನಡೆದುಹೋಗುತ್ತದೆ. ನಮ್ಮವರನ್ನು ಕಳೆದುಕೊಂಡು ಮತ್ತೆ ವ್ಯವಸ್ಥೆಯನ್ನು ಜರೆಯಲು ಶುರುವಿಟ್ಟುಕೊಂಡುಬಿಡುತ್ತೇವೆ. ಇನ್ನಾದರೂ ಸ್ವಲ್ಪ ಎಚ್ಚರವಾಗಿರೋಣವಲ್ಲವೇ ?

– ಶಿಶಿರ ಹೆಗಡೆ

ಮೊನ್ನೆ ಒಬ್ಬ ಸಂಬಂಧಿಕರ ಮನೆಗೆ ಹೋಗಿದ್ದೆ….

ಮೊನ್ನೆ ಒಬ್ಬ ಸಂಬಂಧಿಕರ ಮನೆಗೆ ಹೋಗಿದ್ದೆ. ಮನೆಯೊಳಗೆ ಹೊಕ್ಕ ಕೂಡಲೆ ಒಂದು ಸುಮಧುರ ಪರಿಮಳ ಹರಿದುಬಂದು ಮನಸ್ಸೆಲ್ಲ ಅಹ್ಲಾದಕರವಾಗಿ ಅರಳಿತ್ತು. ಅವರ ಸ್ವಾಗತ ಸ್ವಲ್ಪ ಜಾಸ್ತಿಯೇ ಎಂಬಂತಿದ್ದರೂ ಅಷ್ಟೋಂದು ಕಿರಿಕಿರಿಯಾಗುವಷ್ಟಿರಲಿಲ್ಲ. ಹೋದಕೂಡಲೆ ತಂಪಾದ ನೀರನ್ನು ತಂದು ಮುಂದಿಟ್ಟರು. ಗುಟುಕರಿಸಿ ಮಾತನಾಡಲು ಶುರುವಿಟ್ಟುಕೊಂಡೆವು. ಸುದ್ದಿ ಲೋಕಾಭಿರಾಮವಾಗಿ ಎಲ್ಲೆಲ್ಲೋ ಸುತ್ತಿ ಅವರ ೧೪ ವಯಸ್ಸಿನ ಮಗನ ವಿಷಯಕ್ಕೆ ಬಂದು ನಿಂತುಕೊಂಡಿತು. ಮಗನನ್ನು ಹೊಗಳಿದ್ದೇ ಹೋಗಳಿದ್ದು. ಹೊಗಳಿಕೆಗೆ ಕಾರಣ ಅವರ ಮಗನೆಡೆಗಿನ ಅಪಾರ ಪ್ರೀತಿ ಎಂದಂದುಕೊಂಡು ನಾನು ಸ್ವಲ್ಪ ಸಹಿಸಿಕೊಂಡೆ. ಆದರೆ ಅಷ್ಟರಲ್ಲೇ ಕಿರಿಕಿರಿಯೆಂದೆನಿಸಿ ನನ್ನೊಟ್ಟಿಗೆ ಬಂದ ನನ್ನ ಸಂಬಧೀ ಗೆಳೆಯ ವಿಷಯಾಂತರಕ್ಕೆ ಪ್ರಯತ್ನಿಸುತ್ತಲೇ ಇದ್ದ. ಆದರೆ ಆ ಮನುಷ್ಯ ಮಾತ್ರ ಅದಕ್ಕೆ ಅವಕಾಶವನ್ನೇ ನೀಡದೇ ಹೊಗಳು ಭಠನಂತೆ ಹೊಗಳುತ್ತಲೇ ಸಾಗಿದ. ಆಮೇಲೆ ಅನಿವಾರ್ಯವಾಗಿ ನಾನು ಕೂಡ ಮಗನಿಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳಬೇಕಾಯಿತು. ನನ್ನೊಟ್ಟಿಗಿದ್ದ ಗೆಳೆಯನತ್ತ ಗಮನವನ್ನೇ ಹರಿಸದೇ ನಾನು ಒಂದು ಪ್ರಶ್ನೆ ಅವರ ಮಗನ ಬಗ್ಗೆ ಕೇಳಿದ್ದಕ್ಕೆ ಓತಪ್ರೋತವಾಗಿ ಹೊಗಳುತ್ತಲೇ ಸಾಗಿತ್ತು ಅವರ ಸುದ್ದಿ. ಬಿಸಿ ಬಿಸಿ ಚಹಾ ಕೊಟ್ಟ ಅವರ ಮನೆಯೋಡತಿ ಕೂಡ ಅದೇ ’ಮಗನನ್ನು ಹೊಗಳುವ ರೋಗ’ಕ್ಕೆ ತುತ್ತಾದದ್ದು ಕಂಡು ಮಾತ್ರ ನಾನು ಸ್ವಲ್ಪ ಅಧೀರನಾದದ್ದು ಸುಳ್ಲಲ್ಲ. ಒಂದೇ ಒಂದು ಪ್ರಶ್ನೆ ಕೇಳಿದ್ದು ಆ ಮಾತ ಪಿತೃರನ್ನು ಈ ಪರಿಯಾಗಿ activate ಮಾಡುತ್ತದೆಯೆಂದು ನಾನು ಅಂದುಕೊಂಡಿರಲೇ ಇಲ್ಲ. ಏಳನೇ ಕ್ಲಾಸಿನಲ್ಲಿ ೮೫% ಅಂಕಪಡೆದ ಆ ಬಾಲ ಪ್ರತಿಭೆಯನ್ನು ಕಾಣದೇ, ಅವನೆಲ್ಲಿ ಎಂದು ಕೇಳಿದೆ. ಅದಕ್ಕೆ ಯಜಮಾನರು, ’ಟ್ಯೂಶನ್ನಿಗೆ ಹೋಗಿದ್ದಾನೆ, ಇನ್ನೇನು ಬರಬಹುದು’ ಮಾತು ಇಷ್ಟಕ್ಕೇ ನಿಲ್ಲದೇ ಟ್ಯೂಶನ್ನಿನ ಬಗ್ಗೆ ಮತ್ತು ಆ ಟ್ಯೂಶನ್ ಸೆಂಟರಿನ ಇತಿಹಾಸದ ಬಗ್ಗೆ ಇನ್ನಷ್ಟು ಪುರಾಣವನ್ನು ಬಿಗಿಯಲು ಶುರುವಿಟ್ಟುಕೊಂಡರು.

ಅಷ್ಟರಲ್ಲಿ ಡೋರ್ ಬೆಲ್ ಬಡಿದುಕೊಂಡಿತು. ’ಅದೇ.. ಅವನೇ ಬಂದ’ ಎಂದು ಎದ್ದು ಹೋಗಿ ಬಾಗಿಲು ತೆಗೆದು ’ಯಾರು ಬಂದಿದ್ದಾರೆ ನೋಡು’ ಎಂದರು. ಅವನು ಬಾಗಿಲಿನಿಂದ ಈಚೆಗೆ ಬಂದು ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸುವ ನಿರೀಕ್ಶೆಯಲ್ಲಿ ನಾವಿದ್ದೆವು. ಆದರೆ ಹಾಗಾಗಲೇ ಇಲ್ಲ. ಆತ ನಮ್ಮ್ಯಾರ ಮುಖವನ್ನೂ ನೋಡಲಿಲ್ಲ, ಅಥವಾ ನೋಡಿದನೋ ಇಲ್ಲವೋ ನಮಗೆ ತಿಳಿಯಲಿಲ್ಲ. ನೇರವಾಗಿ ತನ್ನ ರೂಮಿಗೆ ಹೊಕ್ಕು ಬಾಗಿಲು ಜಡಿದುಕೊಂಡ. ಇದರಿಂದ ಸ್ವಲ್ಪವೂ ವಿಚಲಿತರಾಗದ ಅವನ ಅಪ್ಪ ’ಅವನಿಗೆ ತುಂಬಾ ನಾಚಿಕೆ’ ಎಂದು ಸಮಜಾಯಿಷಿ ಕೊಟ್ಟದ್ದನ್ನು ನಾವು ನಂಬಿಕೊಳ್ಳಲೇ ಬೇಕಾಯಿತು. ಹಾಗಾಗಿ ಅದನ್ನೇ ಸತ್ಯವೆಂದು ನಂಬಿಕೊಂಡೆವು. ಕೆಲವೇ ಕ್ಷಣಗಳಲ್ಲಿ ಬಾಗಿಲು ತೆರೆದುಕೊಂಡು ಈಚೆಗೆ ಬಂದ ಮಾಣಿ ನನ್ನೆದುರಿಗೇ ಬಂದು ಕುಳಿತುಕೊಂಡಾಗ ’ಹಾಯ್’ ಎಂದೆ. ಅದಕ್ಕೆ ಅನಿವಾರ್ಯವಾಗಿ ಒಂದು ನಗು ಕೂಡ ಬೀರದ ಹುಡುಗ, ಅಲ್ಲೇ ಇದ್ದ ರಿಮೋಟ್ ಕಂಟ್ರೋಲ್ ಅನ್ನು ಅತ್ತುಕೊಂಡು ಅದ್ಯಾವುದೋ ಕಾರ್ಟೂನ್ ಚ್ಯಾನಲ್ ಅನ್ನು ಹಚ್ಚಿಕೊಂಡ. ಅವನ ಅಪ್ಪ ’ಅವನು ಈ ಕಾರ್ಯಕ್ರಮವನ್ನು ಯವತ್ತೂ ತಪ್ಪಿಸಿಕೊಳ್ಳುವುದೇ ಇಲ್ಲ, ಇದು ಬಹಳ ಮಜವಾಗಿರುತ್ತದೆ’ ಎಂದು ನಾವೂ ಅನಿವಾರ್ಯವಾಗಿ ಟಿ.ವಿ.ಯತ್ತ ನೋಡುವಂತೆ ಮಾಡಿದರು.

ಸ್ವಲ್ಪವೇ ಸಮಯದಲ್ಲಿ ನಾನು ಮತ್ತು ಗೆಳೆಯ ಕಿರಿಕಿರಿಯಾದಂತೆನಿಸಿ ’ಸರಿ ಹಾಗಾದರೆ..’ ಎಂದು ಹೊರಡುವುದಕ್ಕೆ ಪೀಠಿಕೆ ಹಾಕಿದೆವು. ಬಾಗಿಲ ಬಳಿ ಬಂದವನಿಗೆ ಯಾಕೋ ತಡೆದುಕೊಳ್ಳಲಾಗದೆ ’ಯಾರಾದರೂ ಮನೆಗೆ ಬಂದಲ್ಲಿ ಅವರನ್ನು ಮಾತನಾಡಿಸುವ ಕನಿಷ್ಟ ಸಂಸ್ಕಾರವನ್ನು ನೀವು ಮಗುವಿಗೆ ಹೇಳಿಕೊಟ್ಟರೆ ಚೆನ್ನಗಿರುತ್ತಿತ್ತು’ ಎಂದು ಹೇಳಿಯೇ ಬಿಟ್ಟೆ. ಬಹುಷ: ಈ ಮಾತನ್ನು ಅಲ್ಲಿದ್ದ ಆ ಮಗುವಿನ ಅಪ್ಪ, ಅಮ್ಮ ಮತ್ತು ನನ್ನೊಂದಿಗಿದ್ದ ಗೆಳೆಯ ನಿರೀಕ್ಶೆಯೇ ಮಾಡಿರಲಿಲ್ಲ. ಅದಕ್ಕೆ ಅವರಿಂದ ಯಾವುದೇ ಉತ್ತರವನ್ನು ನಿರೀಕ್ಷಿಸದೇ ಅಲ್ಲಿಂದ ಹೊರಟು ಬಿಟ್ಟೆ. ಅದ್ಯಾಕೋ ಮೊದಲ ಬಾರಿಗೆ, ಹೊರಡುವ ಸಮಯದಲ್ಲಿ, ಅವರನ್ನು ನಮ್ಮ ಮನೆಗೆ ಅಹ್ವಾನಿಸಲು ಮನಸೇ ಆಗಲಿಲ್ಲ. ಬಹುಷ: ನನ್ನನ್ನು ಆವರು ಇನ್ನೆಂದೂ ಮನೆಗೆ ಕರೆಯುವುದಿಲ್ಲವೆಂದು ಅಂದುಕೊಂಡು ನನ್ನ ಕಾರ್ ಹತ್ತಿ ಸೀಟ್ ಬೆಲ್ಟ್ ಸಿಕ್ಕಿಸಿಕೊಂಡೆ.

ಕೊನೆಯಲ್ಲಿ, ಜಾಣರಾದ ನಿಮಗೆ ಈ ಘಟನೆಯನ್ನು ಅವಲೋಕಿಸುವ ಮತ್ತು ಇಲ್ಲಿ ಕೊನೆಯಲ್ಲಿ ಹೇಳದೇ ಹೋದ ಮಾತುಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯಿದೆಯೆಂಬ ಕಾರಣದಿಂದ ಈ ಲೇಖನವನ್ನು ಇಲ್ಲಿಗೇ ಮುಗಿಸುತ್ತಿದ್ದೇನೆ.

– ಶಿಶಿರ ಹೆಗಡೆ

ಫಾರಿನ್ ರಿಟರ್ನ್ ಜನಸಾಮಾನ್ಯ vs ಫಾರಿನ್ ಟೂರ್ ರಿಟರ್ನ್ ಮಂತ್ರಿ ಮಹೋದಯ

ಫಾರಿನ್ ರಿಟರ್ನ್ ಗಳು ಆಗಾಗ ಅಲ್ಲಿನ ವ್ಯವಸ್ಥೆ ಮತ್ತು ಇಲ್ಲಿನ ಅವ್ಯವಸ್ಥೆಗಳನ್ನು ಪ್ರಸ್ತಾಪಿಸುವುದುಂಟು. ಹಾಗೆಲ್ಲ ಪ್ರಸ್ತಾಪಿಸಿದಾಗ ನಮಗೆ ಮಾತ್ರ ಅದೆಲ್ಲಿಯೋ ಅಡಗಿ ಕುಳಿತ ದೇಶಾಭಿಮಾನ ಎದುರಿಗೆ ಬಂದು ನಮ್ಮನ್ನೇ ಕೆಣಕುತ್ತವೆ. ವಿದೇಶದಲ್ಲಿನ ವ್ಯವಸ್ಥೆಯನ್ನು ಹೊಗಳಿದಾಗ ಮತ್ತು ನಮ್ಮ ಅದೇ ವ್ಯವಸ್ಥೆಯನ್ನು ತೆಗಳಿದಾಗ ದೇಶಪ್ರೇಮ ನಮ್ಮೆದುರಿಗೆ ಧುತ್ತೆಂದು ನಿಲ್ಲುತ್ತದೆ. ಜಾಸ್ತಿ ಏನಾದರು ಆ ಫಾರಿನ್ ರಿಟರ್ನ್ ಹೇಳಿದರೆ ಆತನನ್ನೆ ಏನದರೂ ಹೀಯಾಳಿಸುತ್ತೇವೆ ಇಲ್ಲವೇ “ನಮ್ ದೇಶ ಹೀಗೆ ಮಾರಾಯಾ” ಎಂದು ಹೇಗಾದರೂ ಬಾಯಿಮುಚ್ಚಿಸುತ್ತೇವೆ. ಅಲ್ಲೊಂದು ಸಮಸ್ಯೆಯ ಬಗ್ಗೆ ಚರ್ಚೆ ನಡೆಯದೇ ಹೋಗುತ್ತದೆ. ಮೂಲದಲ್ಲಿ ಸಮಸ್ಯೆಯಿಂದ ನಾವು ದೂರ ಸರಿಯಲು ಪ್ರಯತ್ನಿಸುತ್ತೇವೆಯೇ ಅಥವಾ ಸಮಸ್ಯೆ ಭಾರತದ ಮಟ್ಟಿಗೆ ಬಗೆಹರಿಯದ ಸಮಸ್ಯೆಯೆಂದು ಒಪ್ಪಿಕೊಂಡುಬಿಡುತ್ತೇವೆಯೇ ?

ನಮ್ಮ ರಾಜಕಾರಣಿಗಳು ಪದೇ ಪದೆ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ವಿದೇಶಕ್ಕೆ ಹೋಗಿ ಅಲ್ಲಿನ ಕನ್ನಡಿಗರ ಸಂಘಗಳು ಇಟ್ಟುಕೊಳ್ಳುವ ಒಂದಿಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲೇ ನಿಯೋಜಿಸಲ್ಪಟ್ಟ ಒಂದಿಷ್ಟು ಪ್ರವಾಸಿತಾಣಗಳಿಗೆ ಭೇಟಿ ಕೊಡುತ್ತಾರೆ. ಒಂದಿಷ್ಟು ದಿನ ಗುಂಡುಹಾಕಿಕೊಂಡು ಮಜಾ ಮಾಡಿ ಹಿಂದಿರುಗುತ್ತಾರೆ. ಇನ್ನೂವರೆಗೆ ನಾನು ಯಾವುದೇ ಮಂತ್ರಿಯೊಬ್ಬ ಒಂದು ಚಿಕ್ಕ ವಿಚಾರವನ್ನೂ ವಿದೇಶದಲ್ಲಿ ಅರಿತು ಕಲಿತು ಇಲ್ಲಿಗೆ ಬಂದು ಅದನ್ನು ಅನುಷ್ಠಾನಗೋಳಿಸಿದ್ದು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಹೀಗಿರುವಾಗ ಶಾಸಕರ ಮತ್ತು ಮಂತ್ರಿಗಳ ವಿದೇಶಪ್ರಯಾಣದ ಔಚಿತ್ಯವೇನು ? ಈಗಿತ್ತಲಾಗೆ ನಮ್ಮ ಸಮೂಹ ಮಾಧ್ಯಮಗಳು ಇದೇ ಪ್ರಶ್ನೆಯನ್ನು ಮಂತ್ರಿಗಳ ಮುಂದೆ ಇಡುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಆದ್ದರಿಂದಲೇ ಏನೋ, ಯಾವುದೇ ಮಾಧ್ಯಮಗಳಿಗೆ ಸುಳಿವು ಕೊಡದೇ ಹಲವು ಮಂತ್ರಿಗಳು ಈಗೀಗ ವಿದೇಶಕ್ಕೆ ಹೋಗಿ ಬರುತ್ತಿದ್ದಾರೆ.

ಮುಖ್ಯಮಂತ್ರಿಯಾದವರು ಈ ಮಂತ್ರಿಗಳ ವಿದೇಶ ಪ್ರಯಾಣಕ್ಕೆ ಅಡ್ಡಗಾಲು ಹಾಕುವಂತಿಲ್ಲ. ಬೇಕಾಗಲೀ ಅಥವಾ ಸಖಾ ಸುಮ್ಮನೆಯಾಗಲಿ, ಶಾಸಕರ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಅನುಮೋದಿಸಲೇ ಬೇಕು. ಇಲ್ಲದಿದ್ದರೆ ಅಲ್ಲೊಂದು ಅಸಮಾಧಾನ, ಭಿನ್ನಮತ ಎದುರಿಸಬೇಕಾಗುವ ಮುಖ್ಯಮಂತ್ರಿಯಾದರೂ ಇನ್ನೇನು ಮಾಡಿಯಾರು ? At least , ಮಂತ್ರಿಯಾದವನು ಒಂದೇ ಒಂದು ಉತ್ತಮ ಕಾರ್ಯವನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಇಲ್ಲಿಗೆ ಬಂದು ಅನಿಷ್ಠಾನ ಮಾಡಿದ್ದಿದ್ದರೆ ಇಷ್ಟೋತ್ತಿಗೆ ಈ ದೇಶ ಇನ್ಹ್ಯಾಗೋ ಇರುತ್ತಿತ್ತು. ಈ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಪ್ರಶ್ನಿಸಿವವರ್ಯಾರು ? ವಿದೇಶಕ್ಕೆ ಹೋಗಿ ಬಂದ ಮಂತ್ರಿ ಎಂದಾದರೂ ತಾನಿಂತದ್ದೊಂದನ್ನು ನೋಡಿ ಬಂದೆ, ಅದನ್ನು ಇಲ್ಲಿ ಅನುಷ್ಠಾನ ಮಾಡಬಹುದು ಎಂದು ಒಮ್ಮೆಯಾದರೂ ಉಸುರಿದ್ದಾನೆಯೇ? ಪ್ರಜೆಗಳ ಹಣದಲ್ಲಿ ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವ ಈ ಮಂತ್ರಿಗಳಿಗೆ ಪಾಪ ಪ್ರಜ್ನೆ ಕಾಡುವುದೇ ಇಲ್ಲವೇ ?

ಯಾಕೆ ನಮ್ಮ ಮಂತ್ರಿಗಳಿಗೂ ಮತ್ತು ಫಾರಿನ್ ರಿಟರ್ನ್ ಗಳಿಗೂ ಒಮ್ಮೆ ಹೋಲಿಸಿ ನೋಡಬಾರದು ? ಫಾರಿನ್ ರಿಟರ್ನುಗಳು ಬೇರೆ ಯಾರೂ ಅಲ್ಲವಲ್ಲ. ಅವರೂ ಕೂಡ ನಮ್ಮ ನಿಮ್ಮಂತೆಯೇ ಇದೇ ದೇಶದ ಒಬ್ಬ ಸಾಮಾನ್ಯ ಪ್ರಜೆಯೇ. ಅವಕಾಶ ಮತ್ತು ವಿದ್ಯೆಯಿಂದ ನಮ್ಮಲ್ಲಿಗಿಂತಲೂ ಉತ್ತಮವಾದ ಇನ್ನೊಂದು ವ್ಯವಸ್ಥೆಯಲ್ಲಿ ಅವರು ಕೆಲಸಕ್ಕೋ ಅಥವಾ ವಾಣಿಜ್ಯೋದ್ದೇಶಕ್ಕೋ ತೆರಳಿ ವಾಪಸ್ ಬಂದವರಷ್ಟೇ. ಅದರಲ್ಲಿ ಯಾವುದೇ ತಪ್ಪು ನನಗಂತೂ ಕಾಣಿಸುತ್ತಿಲ್ಲ. ಇಷ್ಟಕ್ಕೂ ಎಲ್ಲ ಫಾರಿನ್ ರಿಟರ್ನ್ ಗಳೂ ತಾನು ವಿದೇಶಕ್ಕೆ ಹೋಗಿ ಹಿಂದಿರುಗಿ ಬಂದವನೆನ್ನುವ ಅಹಂ ನಿಂದ ಅಲ್ಲಿನ ವ್ಯವಸ್ಥೆಯನ್ನು ಹೊಗಳುವುದಾಗಲೀ ಅಥವಾ ಇಲ್ಲಿನ ವ್ಯವಸ್ಥೆಯನ್ನು ತೆಗಳುವುದಾಗಲೀ ಮಾಡುತ್ತಾನೆಯೇ ? ಖಂಡಿತ ಒಪ್ಪುವ ಮಾತಲ್ಲ. ಅಲ್ಲೊಂದು ಅಸಮಾಧಾನ ಹುಟ್ಟಿಕೊಂಡಿರುವುದು ತನ್ನ ದೇಶದ ಮಟ್ಟಿಗೆ ಆತ ಇಟ್ಟುಕೊಂಡಿರುವ ಪ್ರೇಮದಿಂದಾಗಿ ಅಲ್ಲವೇ. ಯಾಕೆ ನಮ್ಮ ದೇಶವೂ ಹಾಗಾಗಬಾರದು ಎಂಬ ಒಂದು ಹಂಬಲದಿಂದಾಗಿ ಆಡಿದ ಮಾತುಗಳಲ್ಲವೇ ? ಆತನ ಮಾತುಗಳು ನಮ್ಮ ಮನಸ್ಸಿನಲ್ಲೊಂದು ನಿರಾಸೆಯನ್ನು ಮೂಡಿಸುತ್ತವೆ, ಅದಕ್ಕೆ ಕೂಡ ಕಾರಣ ನಮ್ಮಲ್ಲಿನ ದೇಶದ ಬಗೆಗಿನ ಉತ್ಕಟ ಪ್ರೇಮವೇ ಹೊರತು ಇನ್ನೊಂದಲ್ಲ. ಹೀಗೆ ಒಬ್ಬ ಸಾಮಾನ್ಯ ಪ್ರಜೆಯೊಬ್ಬ ವಿದೇಶದಲ್ಲಿ ಅಲ್ಪಕಾಲ ನೆಲೆಸಿ ಅಲ್ಲಿ ಓಡಾಡಿದಾಗಲೆಲ್ಲ ಆತ ಹೆಜ್ಜೆ ಹೆಜ್ಜೆಗೂ ತನ್ನ ದೇಶದ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾನೆ. ಒಂದು ಉತ್ತಮ ವ್ಯವಸ್ಥೆಯನ್ನು ನೋಡಿದಾಗಲೆಲ್ಲ ಇದ್ಯಾಕೆ ನಮ್ಮ ದೇಶದಲ್ಲಿಲ್ಲವೆಂದು ಅಂದುಕೊಳ್ಳುತ್ತಾನೆ. ಯಾಕೆ ಹೀಗೊಂದು ಉತ್ತಮ ವ್ಯವಸ್ಥೆಯನ್ನು ನಮ್ಮದಾಗಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆಯೆಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತಾನೆ. ಆದರೆ ಪ್ರಜೆಗಳ ದುಡ್ಡಿನಲ್ಲಿ ಪುಕ್ಕಟೆ ವಿದೇಶ ಸುತ್ತುವ ರಾಜಕಾರಣಿಗಳಿಗೆ ಈ ಪ್ರಶ್ನೆಯು ಏಳುವುದೇ ಇಲ್ಲವೇ ? ಯಾಕೆ ವಿದೇಶಕ್ಕೆ ಹೋದಾಗ ಅಲ್ಲಿನ ವ್ಯವಸ್ಥೆಯನ್ನು ಸವಿಯುತ್ತಲೇ ಕಾಲಹರಣ ಮಾಡಿಬಿಡುತ್ತಾರೆ ನಮ್ಮ ಮಂತ್ರಿವರ್ಯರು! ಅದೇ ಜನಸಾಮಾನ್ಯನಿಂದ ಮಂತ್ರಿ ಪದವಿಗೆ ಏರಿದ ಒಬ್ಬ ಮನುಷ್ಯ ರಾಜಕಾರಣವೆಂಬ ಹೊಲಸು ವ್ಯವಸ್ಥೆಯಿಂದ interval ಪಡೆಯಲು ವಿದೇಶ ಪ್ರಯಾಣ ಬೆಳೆಸುತ್ತಾನೆಯೇ ? ಈ ಮಂತ್ರಿಗಳನ್ನು ಪ್ರಶ್ನಿಸುವವರ್ಯಾರು ?

ಒಂದಿಷ್ಟು ವ್ಯವಸ್ಥೆಯ ಅವ್ಯವಸ್ಥೆಯ ಜಡ್ಡಿನ ಮೈದಡವುತ್ತ…
ಶಿಶಿರ ಹೆಗಡೆ

ಏಕಾಂಗಿಯಾಗುವ ಮುನ್ನ…

ಆಗಿನ್ನೂ ಆಟ ಆಡಿಕೊಂಡು ಓದಿಕೊಂಡು ಇರುವ ವಯಸ್ಸು. ಆಗಿನ ದಿನಚರಿ ಇನ್ನೂ ನೆನಪಿದೆ. ನಾನು ಸಾಯಂಕಾಲ ಕಾಲೇಜಿನಿಂದ ಬಂದಕೂಡಲೆ ಅಮ್ಮ ಮಾಡಿಕೊಡುತ್ತಿದ್ದ ಚಪಾತಿಯೋ ಅಥವಾ ಇನ್ಯಾವುದೋ ತಿಂಡಿಯನ್ನು ಲಗುಬಗೆಯಲ್ಲಿ ತಿಂದು ವಾಲೀಬಾಲ್ ಮೈದಾನಕ್ಕೆ ಓಡುವ ಧಾವಂತ. ಕತ್ತಲಾಗುವ ವರೆಗೆ ಆಡಿ, ಇತರೆ ಹುಡುಗರು ಅಲ್ಲೇ ಹರಟೆ ಹೊಡೆಯುತ್ತಿರುವಾಗ ಅಪ್ಪಯ್ಯ ಬಯ್ಯುತ್ತಾರೆ ಎಂಬ ಒಂದೇ ಕಾರಣಕ್ಕೆ ಮನೆಯತ್ತ ಓಡುತ್ತಿದ್ದೆ. ಕೈಕಾಲು ತೊಳೆದು ಭಜನೆ ಮಾಡಿ ನನ್ನ ರೂಮನ್ನು ಸೇರಿಕೊಳ್ಳುತ್ತಿದ್ದೆ. ಸಾಯಂಕಾಲ ತಿಂಡಿ ತಿಂದಿದ್ದರಿಂದ ರಾತ್ರಿ ಅಷ್ಟಾಗಿ ಹಸಿವಾಗಿರುತ್ತಲೇ ಇರುತ್ತಿರಲಿಲ್ಲ. ಮಲಗುವ ಮುನ್ನ ಅಮ್ಮನ ಒತ್ತಾಯಕ್ಕೆ ಸ್ವಲ್ಪ ಹಾಲು ಕುಡಿದು ಮಲಗುತ್ತಿದ್ದೆ. ಅಪ್ಪಯ್ಯ-ಅಮ್ಮ ಅವರಷ್ಟಕ್ಕೆ ಅವರು ಊಟ ಮಾಡುತ್ತಿದ್ದರು. ನಂತರ ಬೇಗ ಮಲಗಿಬಿಡುತ್ತಿದ್ದರು. ನಾನು ಯಾವುದಾದರೂ ಪಠ್ಯೇತರ ಪುಸ್ತಕವನ್ನು ಹಿಡಿದು ಓದುತ್ತಿದ್ದೆ ಮತ್ತು ಅವರು ಮಲಗಿದ ಮೇಲೆ ಒಂದೆರಡು ತಾಸು ಟಿವಿ ನೋಡಿ ಮತ್ತೆ ತುಂಬಾ ತಡವಾಗಿ ಮಲಗುತ್ತಿದ್ದೆ. ಸಹಜವಾಗಿ ಬೆಳಿಗ್ಗೆ ಮಾತ್ರ ಬೇಗ ಏಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪಯ್ಯ ಎಷ್ಟು ಎಬ್ಬಿಸಿದರೂ ನಾನು ಮಾತ್ರ ಏಳುತ್ತಿರಲಿಲ್ಲ. ಶಿಸ್ತಿನ ಅಪ್ಪಯ್ಯ ಮುನಿಸಿಕೊಳ್ಳುತ್ತಿದ್ದರು. ಅಪ್ಪಯ್ಯನ ಶಿಸ್ತಿನ ಮೇಲೆ ನನಗೂ ಕೋಪ ಬರುತ್ತಿತ್ತು. ಅವರಿಗೆ ಕೇಳದೇ ಹೋದ ಹಾಗೆ ಗೊಣಗಿಕೊಳ್ಳುತ್ತಿದ್ದೆ. ಅಪ್ಪಯ್ಯ ಮಾತ್ರ ಬಹು ಬೇಗ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿ ತಮ್ಮ ಕೆಲಸಕ್ಕೆ ಹೊರಡುತ್ತಿದ್ದರು. ನಾನು ಅವರು ಹೋದ ನಂತರ ನಿಧಾನ ಎದ್ದು ಸ್ನಾನ ಮಾಡಿ, ಏನನ್ನೋ ತಿಂದು ಕಾಲೇಜಿಗೆ ಹೊರಡುತ್ತಿದ್ದೆ. ಮತ್ತೆ ವಾಪಸ್ ಬರುವುದು ಸಂಜೆ. ಒಟ್ಟಾರೆಯಾಗಿ ನಾನು ಮಾತ್ರ ಆಂತರ್ಯದಲ್ಲಿ ಏನನ್ನೋ ಕಳೆದುಕೊಳ್ಳುತ್ತಿರುವ ಭಾವನೆ ಗ್ರಹಿಸುತ್ತಲೇ ಇದ್ದೆ. ಏನೋ ಸರಿಯಾಗಿ ಆಗುತ್ತಿಲ್ಲ ಎಂದು ಮಾತ್ರ ಅನ್ನಿಸುತ್ತಿತ್ತು. ಮನೆಯಲ್ಲಿಯೇ ಇದ್ದರೂ ಎಲ್ಲಿಯೋ ಒಂದು ಅಂತರ ಏರ್ಪಟ್ಟಂತೆ. ಏನೋ ಒಂದು ಮಾತ್ರ ಸರಿಯಾಗಿ ನಡೆಯುತ್ತಿಲ್ಲವೆಂಬ ಭಾವನೆ.

ಒಂದು ದಿನ ಅಪ್ಪಯ್ಯ ಬಹಳ ಕೋಪದಿಂದಿದ್ದರು. ರಾತ್ರಿ ಊಟಕ್ಕೆ ಕೂತಿದ್ದರು. ನನ್ನನ್ನು ಗಟ್ಟಿಯಾಗಿ ಕೂಗಿದರು. ನಾನು ಹೆದರಿ ಬಂದು ಅವರೆದುರು ಕೂತೆ. ಅವರು ಆಗ ಹೇಳಿದ ಮಾತುಗಳ ಮಹತ್ವ ಇಂದು ನೆನಪಿಗೆ ಬರುತ್ತಿದೆ. “ನೋಡೂ, ನಿನ್ನ ದಿನಚರಿ ಸರಿಯಾಗಿಲ್ಲ. ನಿನ್ನದು ಓದು-ಆಟದ ವಯಸ್ಸು. ಅದೆರಡೂ ಬೇಕೇ ಬೇಕು. ಅದ್ಯಾವುದನ್ನೂ ಬಿಡು ಎಂದು ನಾನು ಹೇಳುವುದೇ ಇಲ್ಲ. ಆದರೆ ನಿನ್ನ ಈ ದಿನಚರಿ ಮನೆಯಲ್ಲಿಯ ಜನರಿಂದ ನಿನ್ನನ್ನು ದೂರ ಕರೆದು ನಿಲ್ಲಿಸಿಬಿಡುವ ಮುನ್ನ ನೀನು ಬದಲಾವಣೆ ಮಾಡಿಕೊಳ್ಳಬೇಕು. ನೀನು ಹೀಗೆಯೇ ಇರಬೇಕು ಎಂದು ನಾನೆಂದೂ ಎಂದವನಲ್ಲ. ನೀನು ಹೇಗಿರಬೇಕೆಂಬ ತಿಳುವಳಿಕೆ ನಿನ್ನಲ್ಲಿ ಮೂಡುವ ವಯಸ್ಸಿನಲ್ಲಿ ನಾನೇನೂ ಹೇಳದೇ ಹೋದಲ್ಲಿ ಅದರ ಪರಿಣಾಮಕ್ಕೆ ನಾನೇ ಹೊಣೆಯಾಗುತ್ತೇನೆ”. ನನಗೂ ಕೂಡ ಹಾಗೆಯೇ ಅನ್ನಿಸುತ್ತಿತ್ತೇನೋ. “ಹೌದು ಅಪ್ಪಯ್ಯ, ಯಾಕೋ ನನಗೂ ಹಾಗೆಯೇ ಅನಿಸುತ್ತಿದೆ.” ಎಂದು ಒಪ್ಪಿಸಿಕೊಂಡೆ. ಇಷ್ಟು ಹೇಳಿದ ಅಪ್ಪಯ್ಯನವರಲ್ಲಿ ಇದಕ್ಕೊಂದು ಪರಿಹಾರವಿದೆ ಎಂಬ ನಿರೀಕ್ಷೆಯಲ್ಲಿ ಮುಖವೆತ್ತಿ ಅವರ ಮುಖ ನೋಡಿದೆ. “ನೀನು ತಪ್ಪುತ್ತಿರುವುದು ನಿಜ. ಒಂದೇ ಬದಲಾವಣೆಯಾಗಬೇಕು. ಪ್ರತೀ ದಿನ ಮನೆಯವರೆಲ್ಲ ತಿಂಡಿ ತಿನ್ನುವಾಗ ಮತ್ತು ಊಟಮಾಡುವಾಗ ನೀನು ಬಂದು ಕೂಡಲೇ ಬೇಕು. ಅಷ್ಟೇ…ನಿನ್ನ ಊಟ ಮತ್ತು ತಿಂಡಿ ಮನೆಯವರೊಟ್ಟಿಗಾಗಬೇಕು” ಎಂದು ಸುಮ್ಮನಾದರು. ನಾನು ಕಣ್ಣೊರೆಸಿಕೊಂಡೆ.

ನಮ್ಮಲ್ಲಿಯ ಗಾದೆ ಹೀಗಿದೆ ” ಸಂಗತಿ ರುಚಿಯೋ, ಸಕ್ಕರೆ ರುಚಿಯೋ” ಅಂದರೆ, ಸಕ್ಕರೆಗಿಂತ ರುಚಿ ಎಲ್ಲರೂ ಕೂಡಿದಾಗ ; ಕೂಡಿ ಉಂಡಾಗ. ಭಾರತೀಯತನದಲ್ಲಿ ಮನುಷ್ಯನ ಸಮಾಜ ಪರಿಕಲ್ಪನೆಯ ಭದ್ರ ಅಂಶಗಳಿಗೆ ಇನ್ನೂ ಮಹತ್ವ ಉಳಿದಿರುತ್ತದೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿ ಎಂದು ಹೊಗಳಿಕೊಳ್ಳುವುದು ಸಾಧ್ಯವಾಗಿದೆ. ಕಾಡ ಮನುಷ್ಯ ಸಾಮಾಜಿಕವಾಗಲು ಕಲಿತುಕೊಂಡದ್ದು ಗುಂಪಿನಲ್ಲಿ ಬದುಕಲು ಶುರುವಿಟ್ಟುಕೊಂಡಾಗ. ಆದರೆ ಇತ್ತೀಚೆಗೆ ಇದು ಕೇವಲ ಹೊಟ್ಟೆಪಾಡಿನ ವಿಷಯವಾಗಿದೆ. ಮನುಷ್ಯನಾದ ನಮಗೆ ಊಟ ಕೇವಲ ಹೊಟ್ಟೆ ತುಂಬಿಕೊಳ್ಳುವ ವಿಷಯವಲ್ಲ ಎನ್ನುವ ಅರಿವಿನ ಅವಷ್ಯಕತೆಯಿದೆ. ರಾತ್ರಿ ತಡವಾಗಿ ಮನೆಗೆ ಬಂದು ತ್ರೀಫ಼ೋರ್ಥ್ ಸಿಕ್ಕಿಸಿಕೊಂಡು ಅಮ್ಮನನ್ನು ಸ್ವಲ್ಪ ಮಾತನಾಡಿಸಿ ತಟ್ಟೆಗೆ ಎಲ್ಲವನ್ನೂ ಸುರಿದು (ನಮ್ಮ ಕಡೆ ಮಿಸಾಳು ಭಾಜಿ ಎನ್ನುವ ತಿಂಡಿಯೊಂದಿದೆ) ಹಾಲಿಗೆ ಬಂದು ಇಂಗ್ಲಿಷ್ ನಿವ್ಸ್ ಚ್ಯಾನಲ್ಲನ್ನು ಶೂನ್ಯದಲ್ಲಿ ನೋಡುತ್ತ ಊಟ ಮಾಡೂವುದು ಒಂದು ಪ್ಯಾಷನ್. ಯಾರೇ ಬಂದು ಮಾತನಾಡಿಸಿದರೂ ಮೊಬೈಲ್ ನಲ್ಲಿ ಏನನ್ನೋ ಒತ್ತುತ್ತ ಅವರಿಗೆ ಸುಮಾರಾದ ಉತ್ತರ. ಎಲ್ಲೋ ವಾರಕ್ಕೊಮ್ಮೆ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿದರೆ ಅದೇ ದೊಡ್ಡದು. ಹಾಗಂತ ಅದೇ ಮನುಷ್ಯ ಪಾರ್ಟಿ ಪ್ರಿಯ. ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗುತ್ತಲೇ ಇರುವಾತ ಮನೆಯಲ್ಲಿ ಮಾತ್ರ ಏಕಾಂಗಿ ಊಟಗಾರ. ಅದಕ್ಕೇ ಹಲವರಿಗೆ ಮನೆಯವರಿಗಿಂತ ಸ್ನೇಹಿತರೇ ಅಚ್ಚುಮೆಚ್ಚು. ತಪ್ಪುತ್ತಿರುವುದೇ ಅಲ್ಲಿ. ನಮಗೆ ಅರಿವಿಲ್ಲದೆಯೇ ಕುಟುಂಬದಿಂದ ದೂರ ಸರಿಯುತ್ತ ಸಾಗುವಾಗ ಅದನ್ನು ಗ್ರಹಿಸದೇ ಹೋದಲ್ಲಿ ನಾವು ಮತ್ತೆ ಬದಲಾಗಲು ಸಾಧ್ಯವಾಗದ ಹಂತಕ್ಕೆ ಅತೀ ಬೇಗನೆ ತಲುಪಿಬಿಡುತ್ತೇವೆ. ಅದೆಲ್ಲದರ ನಡುವೆ ಅದೇನನ್ನೋ ತಿಳಿಯದೇ ಕಳೆದುಕೊಂಡುಬಿಡುತ್ತೇವೆ. ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ಅಂತರವೇ ಇಂಥಹ ಚಿಕ್ಕ ಚಿಕ್ಕ ವಿಷಯಗಳು ಹುಟ್ಟಿಹಾಕುವ ದೊಡ್ಡ ದೊಡ್ಡ ಅಂತರಗಳು. ಈ ಅಂತರಗಳನ್ನು ಅರಿಯದೇ ಹೋದಲ್ಲಿ ನಾವು ಜಾನುವಾರುಗಳಂತೆ ವರ್ತಿಸಲು ಶುರುವಿಟ್ಟುಕೊಳ್ಳುತ್ತೇವೆ. ಕೆಲವೊಂದು ಸೂಕ್ಷ್ಮಗಳು ನಮ್ಮ ಕೌಟುಂಬಿಕ ಸಂಬಂಧಗಳನ್ನು ಬಹುವಾಗಿ ನಿಗ್ರಹಿಸುತ್ತವೆ. ಪ್ರತೀ ದಿನ ಯಾವಾಗಲೂ ಮನೆಯವರೆಲ್ಲ ಸೇರಿ ಒಟ್ಟಿಗೆ ಊಟ ಮಾಡಿ. ಸಾಧ್ಯವಾದಲ್ಲಿ ಒಂದು ಊಟವಾದರೂ ಕೂಡಿ ಮಾಡಿ ಅಥವಾ ಕೊನೆಯಲ್ಲಿ ಒಂದು ತಿಂಡಿ ಒಟ್ಟಿಗಾಗಲಿ. ಸಾಧ್ಯವಿಲ್ಲವೆನ್ನುವ ಯಾವುದೇ ಸಣ್ಣ ಸಬೂಬು ನಿಮ್ಮನ್ನು ಸಮಾಧಾನಪಡಿಸದಿರಲಿ. ಬದಲಾವಣೆಯನ್ನು ನನಗೆ ಹೇಳಿ.

ಮನುಕುಲದೆಡೆಗಿನ ಒಂದಿಷ್ಟು ಕಾಳಜಿಯೊಂದಿಗೆ
-ಶಿಶಿರ ಹೆಗಡೆ.

ಒಂದು ಕಪ್ಪೆ , ಯೆಡ್ಯೂರಪ್ಪ ಮತ್ತು ಅಣ್ಣಾ ಹಜಾರೆ.

ಅದೆಲ್ಲಿಯೋ ಓದಿದ ಕಥೆ ನೆನಪಾಗುತ್ತಿದೆ. ಒಂದು ಗುಂಪಿನ ಕಪ್ಪೆಗಳೆಲ್ಲ ಅದೆಲ್ಲಿಯೋ ಆಹಾರವನ್ನೋ ಇನ್ನೇನನ್ನೋ ಅರಸಿ ಹೊರಟಿದ್ದವು. ಒಂದರ ಹಿಂದೊಂದರಂತೆ ಹಾರಿ ನೆಗೆದು ಜಿಗಿದು ಎತ್ತೆತ್ತಲೋ ಸಾಗುವಂತೆ ಒಂದೇ ಗೊತ್ತು ಗುರಿಯಿಲ್ಲದೇ, ಉದ್ದೇಶವೊಂದೇ ಎಂಬಂತೆ ಸಾಗುತ್ತಲೇ ಇದ್ದವು. ಒಂದು ಮರದ ದಿಮ್ಮಿಯನ್ನು ಹತ್ತಿ ನೀರಿನ ಹೊಂಡವೊಂದನ್ನು ದಾಟುತ್ತಿರುವಾಗ ಫಕ್ಕನೆ ಆಯತಪ್ಪಿ ಎರಡು ಕಪ್ಪೆಗಳು ಕೆಳಗಿನ ಹೊಂಡಕ್ಕೆ ಬಿದ್ದು ಬಿಟ್ಟವು. ಎರಡೂ ಕಪ್ಪೆಗಳು ಅತಿ ಕಷ್ಟಪಟ್ಟು ನೆಗೆನೆಗೆದು ಹಾರಿ ಹೊರಬರಲು ಹರಸಾಹಸ ಪಡುತ್ತಿದ್ದವು. ಇದನ್ನು ನೋಡಿದ ಉಳಿದ ಕಪ್ಪೆಗಳು “ಹೊಂಡ ಬಹಳ ಆಳವಿದೆ, ಅಲ್ಲಿಯೇ ನೀವು ಆದಷ್ಟು ದಿನ ಬದುಕಿ ಸಾಯುವುದು ಉತ್ತಮ, ಅದಿಲ್ಲದೇ ಹೋದಲ್ಲಿ ವ್ಯರ್ಥ ಪ್ರಯತ್ನ ಮಾಡಿ ಸುಸ್ತಿನಲ್ಲಿ ಸಾಯುವುದು ಬೇಡ” ಎಂಬಿತ್ಯಾದಿ ಕೂಗಿಕೊಂಡವು. ಪ್ರಯತ್ನ ಮಾಡೀ ಸೋತು ಸಾಯುವುದಕ್ಕಿಂತ ಅಲ್ಲಿಯೇ ಇದ್ದ ಹುಳು-ಹುಪ್ಪಡಿಗಳನ್ನು ತಿಂದು ಆದಷ್ಟು ದಿನ ಬದುಕಿ ಸಾಯುವುದೇ ಉತ್ತಮವೆಂದು ಹಿರಿಯ ಕಪ್ಪೆಯೂ ಬುದ್ಧಿವಾದ ಹೇಳಿತು. ಇದನ್ನೆಲ್ಲ ಕೇಳುತ್ತಲೇ ಒಂದು ಕಪ್ಪೆ ಹಾರುತ್ತ ಹಾರುತ್ತ ಕೊನೆಗೆ ಸೋತು ಸತ್ತುಬಿದ್ದಿತು, ಆದರೆ ಇನ್ನೊಂದು ಕಪ್ಪೆ ಮಾತ್ರ ಮತ್ತೂ ನೆಗೆನೆಗೆದು ಹಾರುತ್ತಲೇ ಇತ್ತು. ಹಾರುತ್ತ ಹಾರುತ್ತ ತನ್ನ ಪ್ರಯತ್ನ ಮಾಡುತ್ತಲೇ ಇತ್ತು. ಕೊನೆಯ ನೆಗೆತದಲ್ಲಿ ತನ್ನ ಶಕ್ತಿಯನ್ನೆಲ್ಲ ಒಮ್ಮೆಲೇ ಬಳಸಿದಂತೆ ನೆಗೆದು ಮೇಲೆ ಬಂದು ಬಿಟ್ಟಿತು. ಆಗ ಮೇಲೆ ಇದ್ದ ಕಪ್ಪೆಗಳಿಗೆಲ್ಲ ಸಂತೋಷವೋ ಸಂತೋಷ. ಆಗ ಹಿರಿಯ ಕಪ್ಪೆ ಅದರ ಬಳಿ ಬಂದು ,”ನಾವೆಲ್ಲ ಬೇಡ ಬೇಡವೆಂದರೂ ನೀನು ನಿಲ್ಲದೇ , ಸಾವಿಗೆ ಅಂಜದೇ ನೆಗೆಯುತ್ತಲೇ ಯಶಸ್ವಿಯಾದೆಯಲ್ಲಾ, ನಿನಗೆ ಶಹಬಾಸ್”. ಆಗ ಜಯಿಸಿದ ಕಪ್ಪೆ ಹೀಗೆಂದಿತು,”ನಿಮಗೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನನಗೆ ಕಿವಿ ಕೇಳುತ್ತಿಲ್ಲದಿದ್ದರೂ ನೀವು ಕೊಟ್ಟ ಪ್ರೋತ್ಸಾಹದಿಂದಲೇ ನಾನು ಹಾರಿ ಜಯಿಸಿ ಬರಲು ಸಾಧ್ಯವಾಯಿತು”.

ಈ ಕಥೆ ನೆನಪಾದಾಗ ಅಣ್ಣಾ ಹಜಾರೆಯವರ ಈಗಿತ್ತಲಾಗಿನ ಮಾತುಗಳು, ನಮ್ಮ ಯೆಡ್ಯೂರಪ್ಪನವರ ವಿಪಕ್ಷದ ಮೇಲಿನ ಮುನಿಸಿನ ನುಡಿಗಳು ಇವೆಲ್ಲ ಫಕ್ಕನೆ ಸ್ಮೃತಿಪಟಲದಲ್ಲಿ ಚಣಕಾಲ ನೆಲೆ ನಿಂತು ಸರಿದು ಹೋದವು.

– ಶಿಶಿರ ಹೆಗಡೆ

ಪಾತ್ರ-ಅಪಾತ್ರರ ನಡುವೆ…

ನನ್ನ ಗೆಳೆಯನೊಂದಿಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆ. ನಾನು ಮತ್ತು ನನ್ನ ಸ್ನೇಹಿತ ಬಹುತೇಕವಾಗಿ ಕಾರಣವಿಲ್ಲದೇ ವಾಯುವಿಹಾರ ಮಾಡಿಕೊಂಡು ನಡೆದಾಡುವ ಜಾಯಮಾನದವರಲ್ಲದೇ ಹೋದದ್ದಾಗಿಯೂ ಆ ದಿನ ಸುಮ್ಮನೆ ನಡೆದುಕೊಂಡು ಹೊರಟಿದ್ದೆವು. ನಾನು ಬೆಂಗಳೂರಿಗೆ ಆಗ ಬಂದು ಇನ್ನೂ ಒಂದು ವರುಷ ಆಗಿರಲಿಲ್ಲವೇನೋ, ಆದರೆ ನನ್ನ ಗೆಳೆಯ ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲಿನ ಗಾಳಿತಿಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ನನಗೆ ಎಲ್ಲವೂ ಹೊಸತಾದರೂ ಯಾಕೋ ಹೊಸತೆಂದು ಅಥವಾ experience ಇಲ್ಲದವನ ರೀತಿಯಲ್ಲಿ ನಡೆದುಕೊಳ್ಳುವ ಮನಸ್ಸು ನನ್ನದಿರಲಿಲ್ಲ. ನಮ್ಮೆದುರಿನಲ್ಲಿ ನಡೆದಾಡುವ ಯಾವೊಬ್ಬರೂ ನನ್ನನ್ನು ’ಹೊಸಬ’ನೆಂದೆಂದುಕೊಳ್ಳಬಾರದು ಎಂಬ ಚಿಕ್ಕದೊಂದು ಆಸೆಯನ್ನು ನಾನು ಬಹು ಪ್ರಮುಖವೆಂಬಂತೆ ಪರಿಗಣಿಸಿದ್ದಿರಬಹುದು. ಹೀಗೆಲ್ಲದರ ನಡುವೆ ನಮ್ಮ ಧೂಳಿನ ವಿಹಾರ (ವಾಯು ವಿಹಾರವೆನ್ನುವಹಾಗೆ ನಮ್ಮ ಬೆಂಗಳೂರು ಆಗಲೇ ಇರಲಿಲ್ಲ ಬಿಡಿ) ಮುಂದುವರಿದಿತ್ತು , ದಿಕ್ಕು ದೆಸೆಯಿಲ್ಲದೆ.

ಆಗ ಕಾಣಿಸಿಕೊಂಡ ನನ್ನೆದುರಿನ ಒಂದು ದಂಪತಿಗಳನ್ನು ಬಹುಷ: ನಾನು ಜೀವಮಾನದಲ್ಲೆಂದೆಂದೂ ಮರೆಯಲಾರೆ. ಒಂದು ಪುಟ್ಟ ಕಂದನನ್ನು ಕೈಯಲ್ಲಿ ಹಿಡುದುಕೊಂಡವ ಮುಖಭಾವದಲ್ಲಿ ತೀರಾ ದೈನ್ಯನಾಗಿದ್ದ. ಆತನ ಹೆಂಡತಿ ಅಷ್ಟೇನೂ ಕಂಗಾಲಾದಂತಿರಲಿಲ್ಲ. ಗಂಡನೊಂದಿಗೆ ನಿಲ್ಲುವುದೇ ತನ್ನ ಕರ್ತವ್ಯವೆನ್ನುವಂತೆ ನಿಂತಿದ್ದಳು, ಮಗು ಮಾತ್ರ ಅತೀ ಶಾಂತವಾಗಿ ಸುತ್ತಲಿನ ಜಗತ್ತನ್ನೆಲ್ಲ ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿತ್ತು. ಅದು ಏನನ್ನೋ ಕಲಿಯುತ್ತಿದ್ದಂತಿತ್ತು. ಬೇಗ ಎಲ್ಲವನ್ನು ಕಲಿತುಬಿಡಬೇಕು ಎಂದು ಕಣ್ಣರಳಿಸಿ ಏನನ್ನೋ ಹುಡುಕಿದಂತೆ. ’ಸಾಹೇಬ್, ಆಪ್ಕೊ ಹಿಂದಿ ಆತೀಹೆ?’. ನಾನು ’ಹೌದು’ ಎಂದೆನ್ನುವಾಗಲೇ ನನ್ನ ಗೆಳೆಯ ನನ್ನನ್ನು ಕೈಹಿಡಿದು ಎಳೆದದ್ದು ನನ್ನಲ್ಲಿ ಅಸಹನೆ ತತ್-ಕ್ಷಣ ಹುಟ್ಟುಹಾಕಿದ್ದು ಇನ್ನೂ ನೆನಪಿದೆ. ಇದ್ದ ಐವತ್ತುರೂಪಾಯಿಯನ್ನು ಅವನಿಗೆ ಕೊಡುವವನಿದ್ದೆ. ಗೆಳೆಯ ಬಿಡಲಿಲ್ಲ. ಅವರೆದುರಿಗೇ ಅವರಿಗೆಲ್ಲ ಅವಮಾನವಾಗುವಂತೆ ಬೈದ. ಆ ಆಸಾಮಿ ’ಸಾರ್, ಕೊಯಿ ಪತಾ ನಹಿ ಹೆ, ವಾಪಸ್ ಗಾವ್ ಜಾನಾ ಹೆ, ಕುಚ್ ಹೆಲ್ಪ್ ಕರೊ ಭಯ್ಯಾ’ ಎಂದೆನ್ನುತ್ತಲೇ ಇದ್ದ. ’ಎಲ್ಲ ಮೋಸ ಕಣೋ’, ಎಂದು ನನ್ನನ್ನು ಎಳೆದುಕೊಂಡು ಹೊರಟ ನನ್ನ ಗೆಳೆಯ. ನನ್ನ ಮನಸ್ಸು ಯಾಕೋ ತಡೆಯಲಿಲ್ಲ ಆದರೆ ಗೆಳೆಯ ನನ್ನನ್ನು ತಡೆದ. ಹಾಗೆಯೇ ನಡೆದೆವು. ಈ ಥರಹದ ಮೋಸ ನಿಜವಿರಬಹುದು, ಆದರೆ ಆ ಜೋಡಿ ನಿಜವಾಗಿಯೂ ತೊಂದರೆಯಲ್ಲಿದ್ದಿದ್ದರೆ?
Twitter@iHegde
ಮನಸ್ಸು ಯಾಕೋ ಉಡುಪಿ ಹೊಟೆಲ್ಲಿನ ದೋಸೆ ಬೇಡವೆಂದಿತು. ದೋಸೆ ತಿನ್ನುವ ದುಡ್ಡಲ್ಲಿ ಆತ ಅದ್ಯಾವುದೋ ಊರಿಗೆ ತಲುಪುತ್ತಿದ್ದನೇನೋ ? ಆತನದೇ ಆದ ಮುಗ್ಧ ಜಗತ್ತು ಅವನನ್ನು ಕಾಯುತ್ತಿದೆಯೇನೋ ? ಗೊತ್ತಿಲ್ಲ. ಗೊಣಗಿಕೊಂಡೆ. ಗೆಳೆಯ ಕೇಳಿಸಿಕೊಂಡ. ಏನೂ ಉತ್ತರವಾಗಿ ಮಾತನಾಡಲಿಲ್ಲ, ಹಾಗೆಂದು ಕೋಪವನ್ನೂ ನನ್ನ ಮೇಲೆ ತೋರಿಸಲಿಲ್ಲ. ನನಗೆ, ನಾನು ಮೋಸ ಹೋಗುವವನಿದ್ದೆನೋ ಅಥವಾ ಅನ್ಯಾಯವಾಗಿ ಒಬ್ಬನನ್ನು ಕಷ್ಟದಲ್ಲಿ ಸಹಾಯ ಮಾಡಲು ನನ್ನಲ್ಲಿ ಸಾಧ್ಯವಿದ್ದರೂ ಕೈಬಿಟ್ಟು ಬಂದೆನೋ, ಒಂದೂ ಅರ್ಥವಾಗದ ಗೊಂದಲದಲ್ಲಿದ್ದೆ. ವಾಯು ವಿಹಾರ ಮುಗಿಸಿ ಅಥವಾ ಅದರ ಅರ್ಧವನ್ನು ಮುಗಿಸಿ ಇನ್ನರ್ಧಕ್ಕೋಸ್ಕರ, ವಾಪಸ್ ಹೊರಟಾಗ ಆ ಜೋಡಿ ಅಲ್ಲಿಯೇ ಸಿಕ್ಕರೆ ನನ್ನ ಗೆಳೆಯನನ್ನು ಒಪ್ಪಿಸಿ ಅವರಿಗೆ ಸಹಾಯ ಮಾಡಬೇಕೆಂದು ಗಟ್ಟಿ ಮನಸ್ಸು ಮಾಡಿಕೊಂಡೆ. ಆದರೆ ಅದನ್ನು ಗೆಳೆಯನ ಬಳಿ ಚರ್ಚಿಸಲು ಯಾಕೋ ಮನಸ್ಸಾಗಲಿಲ್ಲ. ನಾನಿನ್ನೂ ಆ ಜೋಡಿಯನ್ನು ಮೋಸದ ಜೋಡಿಯೆಂದು ಪರಿಗಣಿಸಿರಲಿಲ್ಲ. ಆ ಧೈರ್ಯ ನನಗಿರಲಿಲ್ಲ. ಹೋಗುವಾಗ ಕತ್ತಲು ಕ್ರಮೇಣ ಆಕ್ರಮಿಸುತ್ತಿತ್ತು. ಅದಾಗಲೇ ತಮ್ಮ ಬೆಳಗು ಶುರುವಾಗುತ್ತಿದೆಯೇನೋ ಎನ್ನುವಂತೆ ಬೀದಿಯಲ್ಲಿ ಹಾಕಿದ ಹೀಲಿಯಂ ದೀಪಗಳು ಕಣ್ಣುಜ್ಜಿಕೊಳ್ಳುತ್ತಿವೆ. ದೀಪದ ಹುಳ ಹುಪ್ಪಡಿಗಳೆಲ್ಲ ಕೆಲಸಕ್ಕೆ ಅಣಿಯಾಗುತ್ತಿದೆ. ಮರದಲ್ಲಿ ದಿನವಿಡೀ ಕಳೆದ ಹಲ್ಲಿಗೆ ಅದು ಕಂಬ ಏರುವ ಸಮಯ, ಊಟದ ಸಮಯ. ಹೀಗೆಲ್ಲ ವಾತಾವರಣ. ನಾವು ಕ್ರಮಿಸುತ್ತಿದ್ದೇವೆ. ಒಂದು ಕ್ಷಣ, ಅರೆ ಕತ್ತಲಲ್ಲಿ ಕ್ರಮಿಸಿ ಹೋದ ಜೋಡಿ ಅದೇ ಜೋಡಿಯೇ ? ಆ ಶೂನ್ಯದಲ್ಲಿ ಕಳೆಯದೇ ಹೋದ ವಸ್ತುವನ್ನು ಹುಡುಕುವ ಮುಗ್ಧತೆಯ ಅದೇ ಮಗುವೇ ? ಬೀದಿ ದೀಪದ ಅಸ್ಪಷ್ಟತೆ ಎಲ್ಲ ಮುಖವನ್ನು ಮರೆಸಿದಂತೆ. ಹೌದು ಅದೇ ಕೂಸಿನ ಮೊಗ, ಅದೇ ಹುಡುಕಾಟ. ಅದೇ ಜಗತ್ತನ್ನು ಅರಿಯುವ ಆತುರದಲ್ಲಿ ತಡಕಾಡುವ ಬೊಗಸೆಗಣ್ಣು. ಮತ್ತೆ ಹಿಂದಿನಿಂದ ’ಸಾರ್, ಆಪ್ಕೊ ಹಿಂದಿ ಪತಾಹೆ?’. ಆದರೆ ಈ ಬಾರಿ ಅಪ್ಪ ಅಮ್ಮ ಮಾತ್ರ ಬದಲಾದರೇ? ಹೌದು. ಇದೆಂಥಹ ವೈಚಿತ್ರ್ಯ? ಆ ಕ್ಷಣ. ಅಪ್ಪ-ಅಮ್ಮನೇ ಬದಲು, ಮಗು ಮಾತ್ರ ಅದೇ ! ಮನಸ್ಸೆಲ್ಲ ಜಗತ್ತಿಗೆ ಹೆದರಿದಂತೆ. ಆ ಕ್ಷಣ ಬಹುಷ: ನಾನು ಎಂದೂ ಮರೆಯಲಾರೆ. ನನಗೆ ಜೀವನದ ನೈಜತೆಯ ಅನುಭವದ ಗಳಿಗೆ. ಅದೊಂದು ಸಮಾಜವನ್ನು ಪ್ರೀತಿಸುವ ಮನಸ್ಸು ಕತ್ತು ಹಿಸುಕಿದಾಗ ಉಸಿರನರಸಿದಂತೆ. ಸಮಾಜವನ್ನು ಪತ್ರಿಕೆಗಳು, ಟಿವಿ ವಾಹಿನಿಗಳು ಅದೆಷ್ಟು ಕಟುವಾಗಿ ಟೀಕಿಸಿದರೂ ಅದನ್ನೆಲ್ಲ ಪೂರ್ಣವಾಗಿ ನಂಬಲು ಒಪ್ಪದ ಮನಸ್ಸು ಎಲ್ಲವನ್ನು ಸೋತ ಗಳಿಗೆಯದು. ಅದು ಒಂದು ಅತಿ ಚಿಕ್ಕ ಘಟನೆಯೇ ಇರಬಹುದು, ಆದರೆ ಅದು ನನಗೆ ಅಷ್ಟೂ ಚಿಕ್ಕದೆಂದು ಅದೆಂದೂ ಕಾಣಲೇ ಇಲ್ಲ. ಇದಕ್ಕೆಲ್ಲ ಕೆಲ ಕ್ಷಣಗಳ ಮೊದಲು ಸಹಾಯ ಮಾಡದೇ ಹೋದದ್ದಕ್ಕೆ ಮರುಕಗೊಂಡ ಮನಸ್ಸೇ ಕಾರಣವೇ ಅಥವಾ ಹೊಸದಾಗಿ ನನ್ನೆದುರಿಗೆ ಅದಾಗತಾನೆ ತೆರೆದುಕೊಳ್ಳುತ್ತಿರುವ ಸಮಾಜದ ನೈಜ ಮುಖವೇ?

ದಾನ ಅತೀ ಉತ್ತಮ ಕೆಲಸವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಪಾತ್ರರಿಗೆ ದಾನ ಮಾಡಿದರೆ ಮಹಾ ಪಾಪ ಎನ್ನುವುದು ಮನು ಉಕ್ತಿ. ಇವತ್ತು ಮಹಾನಗರಗಳಲ್ಲಿ, ಪಾತ್ರರಾರು, ಅಪಾತ್ರರಾರು ಎಂದು ಪುಟವಿಡಲು ಸಮಯ ಒಬ್ಬರಿಗೂ ಇಲ್ಲ. ಒಬ್ಬ ನಿಜವಾದ ಸಹಾಯದ ಅವಷ್ಯವಿರುವವನನ್ನು ನಾವು ಗುರುತಿಸಲಾರೆವು, ಯಾಕೆಂದರೆ ಇವತ್ತು ಮೋಸ ಮಾಡಿ ಲಪಟಾಯಿಸುವವ originalಗಿಂತ original.ಇವತ್ತಿನ ಬೆಂಗಳೂರಿನ ಸ್ಥಿತಿ ಹೇಗಿದೆಯೆಂದರೆ, ನೀರಿನಲ್ಲಿ ಬಿದ್ದ ಇರುವೆಯನ್ನೂ ಅನುಮಾನದಿಂದ ನೋಡುವಾಂತಾಗಿದೆ. ಮೋಸವನ್ನು ಬಿಡಲಾರದೇ ಬದುಕುತ್ತಿದ್ದೇವೆಯೇ ? ಮನುಷ್ಯತ್ವವನ್ನು ಹುಟ್ಟುಹಾಕುವ ಮೂಲ ಮಂತ್ರವಾದ ನಂಬಿಕೆಯೆಂಬ ಬೀಜ, ಮೋಸವೆಂಬ ಉರಿಬಿಸಿಲಿನ ಝ್ಹಳಕ್ಕೆ ಒಣಗಿಹೋಗಿದೆ. ಇದೆಲ್ಲ ನಮಗರಿವಿಲ್ಲದ ಹಾಗೆ ನಾವೇ ಕಟ್ಟಿಕೊಳ್ಳುತ್ತಿರುವ ಸಮಾಜ! ಇದೆಲ್ಲ ಬೇಡ. ಚೆನ್ನಾಗಿ ನಮ್ಮ ಸಮಾಜ ಕಟ್ಟಿಕೊಳ್ಳೋಣ. ನಿಜವಾದ ಅರ್ಥದಲ್ಲಿ ಬದುಕು ಕಟ್ಟುಕೊಳ್ಳೋಣ. ನಿಮ್ಮ ಮಕ್ಕಳು ಅಥವಾ ಇನ್ಯಾರೇ ಇರಲಿ, ಲಾಭ ನಿಮಗೇ ಆದರೂ ಮೋಸಕ್ಕೆ ಪ್ರೋತ್ಸಾಹಿಸುವುದು ಬೇಡ. ಕೊನೆಗೆ ನಿಮ್ಮ ಮಗು ಹುಡುಗಾಟಿಕೆಗೋ, ಶಾಲೆಯಲ್ಲಿನ ಇನ್ನೊಂದು ಮಗುವಿನ ವಸ್ತುವನ್ನು ಮನೆಗೆ ಕದ್ದು ತಂದರೆ ಯಬಡಾಸಿ ಹಲ್ಲು ಕಿಸಿಯಬೇಡಿ. ತಿದ್ದಿ – ಬುದ್ದಿ ಹೇಳಿ. ತಮಾಷೆಗೂ ಬೇರೆಯವರಿಗೆ ಮೋಸ ಮಾಡುವುದು ಬೇಡ.

-ಶಿಶಿರ ಹೆಗಡೆ