ಕನ್ನಡ ಮನಸ್ಸಿನ ನೂರೆಂಟು ಆತಂಕಗಳು

ಮೊನ್ನೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಾಗೇರಿಯವರು ಕನ್ನಡ ಪ್ರಭದಲ್ಲಿ ಪ್ರಕಟವಾದ ಸಂದರ್ಶನದ ವೇಳೆ , ಕರ್ನಾಟಕ ಸರಕಾರ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ಹೊಂದಿದೆ ಎಂದು ಪ್ರಸ್ತಾಪಿಸಿದ್ದರು.

ಹಾಗೊಮ್ಮೆ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ಸರಕಾರವೇ ತೆರೆದರೆ ಕರ್ನಾಟಕ ಶಿಕ್ಷಣ ವಲಯದಲ್ಲಿ ಒಂದು ಬಹುದೊಡ್ಡ ಬದಲಾವಣೆ ಆಗಿಬಿಡುತ್ತದೆ. ಅದು ಜನರಿಗೆ ಒಳ್ಳೆಯದೋ ಅಥವಾ ಕೆಟ್ಟದ್ದೊ , ಅಥವಾ ಕನ್ನಡಕ್ಕೆ ಮಾರಕವೋ ಅಥವಾ ಪರಿಣಾಮ ಬೀರದೋ ಎನ್ನುವ ವಿಚಾರ secondary. ಆದರೆ ಈ ಬದಲಾವಣೆಯ ಮುಂಚೆ ನಾವು ತಿಳಿದುಕೊಳ್ಳಬೇಕಾದದ್ದೆಂದರೆ, ಒಮ್ಮೆ ಈ ಬದಲಾವಣೆ ತಂದರೆ ಅದನ್ನು ಯಾರಿಂದಲೂ ಬದಲಾಯಿಸಲು ಅಸಾಧ್ಯ. An irreversible process. ಮಕ್ಕಳೆಲ್ಲಾ ಆಂಗ್ಲ ಮಾಧ್ಯಮಕ್ಕೆ ಸೇರಿಕೊಂಡರೆಂದುಕೊಳ್ಳಿ, ಕನ್ನಡ ಶಾಲೆಯ ಗತಿಯೇನಾಗಬೇಕು ಎನ್ನುವುದು ಹಲವರ ಪ್ರಷ್ನೆ. ನಾಳೆ ಕನ್ನಡ ಶಾಯೆಲೆಗೆ ಶಾಲೆಯೇ ಖಾಲಿ ಹೊಡೆಯಬಹುದು. ಇದು ರಾಜ್ಯದ economics ಮೇಲೆ ಪರಿಣಾಮ ಬೀರುವುದಂತೂ ಖರೆ. ರಾಜ್ಯ ಸರಕಾರ ಮುಂದೊಮ್ಮೆ ಕನ್ನಡ ಶಾಲೆಯ ಶಿಕ್ಷಕರಿಗೆ ಪುಕ್ಕಟೆ ಊಟ ಹಾಕುವ ಪರಿಸ್ಥಿತಿ ಬರಬಹುದು. ಆದ್ದರಿಂದ ಸರಕಾರ ಗಡಿಬಿಡಿಗೆ ಬೀಳದೇ, ಒಂದು ವೈಜ್ಞಾನಿಕ ಚಿಂತನೆ ನಡೆಸಿ ಮುನ್ನಡೆಯುವ ಅವಷ್ಯಕತೆಯಿದೆ. ಎಲ್ಲ ಸಲವೂ ಸರಕಾರ ಜನಾಭಿಪ್ರಾಯದಂತೆ ನಡೆಯಬೇಕೆಂದೇನಿಲ್ಲ. ಜನಾಭಿಪ್ರಾಯ ಕೆಲವೊಮ್ಮೆ ಸಮೂಹ ಸನ್ನಿಯಲ್ಲಿ ತಪ್ಪನ್ನೇ ಆರಿಸಬಹುದು ಅಥವಾ ಪೂರ್ವಾಗ್ರಹಪೀಡಿತವಿರಲೂ ಬಹುದು. ಅಥವಾ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಅದ್ಯಾವತ್ತೋ ಎಲ್ಲಿಯೋ ಮೂಡಿಬಂದ ಲೇಖನ ಅಥವಾ ಟಿ.ವಿ. ಕಾರ್ಯಕ್ರಮ ಜನರನ್ನು ಒಂದೇ ಮುಖದಲ್ಲಿ ವಿಚಾರ ಮಾಡುವಂತೆ ಮಾಡಿರಲೂಬಹುದು. ಹಾಗೊಮ್ಮೆ ಆದಲ್ಲಿ , ಜನರನ್ನು ಈ ಸಮಯಕ್ಕೆ ತೃಪ್ತಿ ಪಡಿಸುವ ಸರಕಾರಕ್ಕಿಂತ ಒಂದು ದೀರ್ಘ ಕಾಲದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವ ಸರಕಾರವೇ ಉತ್ತಮ ಸರಕಾರ ಎನ್ನಿಸಿಕೊಳ್ಳುತ್ತದೆ.

ಕನ್ನಡ ಮನಸ್ಸಿನ ನೂರೆಂಟು ಆತಂಕಗಳುಇದೆಲ್ಲದಕ್ಕೂ ಮೊದಲು ನಮ್ಮ ಭಾರತೀಯ, ಅದರಲ್ಲೂ ಕರ್ನಾಟಕದ ಆಂಗ್ಲ ಮಾಧ್ಯಮದ ಇಂದಿನ ಪರಿಸ್ಥಿತಿ ಮತ್ತು ಅದು ಎಷ್ಟರ ಮಟ್ಟಿಗೆ ಯಶಸ್ಸನ್ನು ಕಂಡಿದೆಯೆನ್ನುವುದು ಅವಲೋಕಿಸುವ ಅವಷ್ಯಕತೆಯಿದೆ. ಗಮನಿಸಿ, ಇಲ್ಲಿ ಶಾಲೆಯ ಯಶಸ್ಸು ಮತ್ತು ಅಲ್ಲಿನ ವಿದ್ಯಾರ್ಥಿಗಳ, ವ್ಯವಸ್ಥೆಯ ಯಶಸ್ಸು ಇವೆರಡೂ ಬೇರೆ ಬೇರೆ. ಆಂಗ್ಲ ಶಾಲೆಗಳು ಯಷಸ್ಸನ್ನು ಕಂಡಿರಬಹುದು ಆದರೆ ಆ ವ್ಯವಸ್ಥೆಗೆ ಯಶಸ್ಸು ಸಿಕ್ಕಿದೆಯೆ ? ನಾವು ಇಲ್ಲಿ ಎರಡನೆಯದನ್ನು ನೋಡಬೇಕು, ಯಾಕೆಂದರೆ ನಮ್ಮ ಸರಕಾರ ಹಾಗೊಮ್ಮೆ ಆಂಗ್ಲ ಮಾಧ್ಯಮಕ್ಕೆ ಕೈ ಹಾಕಿದರೂ ಅದು ಜನರ ಹಿತದೃಷ್ಟಿಯಿಂದಲೇ ಹೊರತು ಲಾಭಮಾಡಲಿಕ್ಕಲ್ಲ. ಸರಕಾರದ ದೃಷ್ಟಿ ಜನಹಿತವೊಂದೇ.

ಇಂದು ಭಾರತದಲ್ಲಿ ಆಂಗ್ಲ ಶಾಲೆಗಳು ಹೆಚ್ಚುತ್ತಿದ್ದರೂ, ಶುದ್ಧ ಇಂಗ್ಲೀಷನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ವೈಜ್ಞಾನಿಕ ವಿಶ್ಲೇಷಣೆ ಹೊರ ಹಾಕಿದ ಸತ್ಯ. ಈ ಎಲ್ಲ ಆಂಗ್ಲ ಶಾಲೆಗಳಲ್ಲಿ ಇಂಗ್ಲೀಷ್ ಒಂದು medium of instruction ಆಗಿದೆಯೇ ವಿನಹ ಇಲ್ಲಿ ವ್ಯಾಕರಣದ ಶುದ್ಧತೆಗೆ ಮಹತ್ವವನ್ನು ನೀಡಲಾಗುತ್ತಿಲ್ಲ. ಭಾಷೆ ಇಂಗ್ಲೀಷೇ ಆದರೂ ಅಲ್ಲಿನ ವಿದ್ಯಾರ್ಥಿಗಳ ಅಂತರ್ ವಿಚಾರ ಧಾರೆ ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿದೆ. It is acting as a hurdle! ಮಕ್ಕಳು ಕನ್ನಡದಲ್ಲಿ ವಿಚಾರ ಮಾಡುತ್ತ ಇಂಗ್ಲೀಷಿನಲ್ಲಿ ಕಲಿಯುತ್ತಿರುತ್ತಾರೆ. ಯಾಕೆಂದರೆ ಮಗುವಿನ ಮಾತೃಭಾಷೆ ಕನ್ನಡವೇ ಆಗಿರುತ್ತದೆ. ಹೀಗೆ ಉಭಯ ಜೀವಿಯಾಗಲು ಹೊರಟ ಮಕ್ಕಳು ಆಕಡೆ ನೀರಿನಲ್ಲೂ ಸರಿಯಾಗಿ ಈಜುತ್ತಿಲ್ಲ ಈ ಕಡೆ ನೆಲದಲ್ಲೂ ಜೋರಾಗಿ ಓಡಲಾಗುತ್ತಿಲ್ಲ. ಇಂದು ಅಲ್ಲಿ ಒಬ್ಬ ಗಣಿತದ ಶಿಕ್ಷಕ ಆಂಗ್ಲ ಭಾಷಾ ಶುದ್ಧತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ’is’-’was’ ಎಲ್ಲವೂ ಒಂದೇ. ಅವರಿಗೆ ಇಂಗ್ಲೀಷ್ ಒಂದು medium of instruction ಮಾತ್ರ. ಆದರೆ ಇಲ್ಲಿ ಗಣಿತದ ಶಿಕ್ಷಕನ ವ್ಯಾಕರಣದ ತಪ್ಪನ್ನು ಮಕ್ಕಳು ಗಣಿತದೊಂದಿಗೆ ಕಲಿತು ಬಿಡುತ್ತಾರೆ. ಇಂದು ಆಂಗ್ಲ ಮಾಧ್ಯಮಗಳಿಂದ ತಯಾರಾಗಿ ಬರುವ ಹೆಚ್ಚಿನ ಮಕ್ಕಳು ಶುಧ್ಧ ಆಂಗ್ಲಭಾಷಾ ಬಳಕೆಯಲ್ಲಿ ಹಿಂದೆ ಬಿದ್ದಿರುವುದನ್ನು ನಾವು ನೋಡುತ್ತೇವೆ. ಇದು ಕೇವಲ ಭಾರತ ಅಥವಾ ಕರ್ನಾಟಕದಲ್ಲಷ್ಟೇ ಅಲ್ಲ. ಇದು ಜರ್ಮನಿ, ಫ಼್ರಾನ್ಸ್, ಜಪಾನ್ ಇವೇ ಮೊದಲಾದ ಆಂಗ್ಲೇತರ ದೇಶದಲ್ಲೂ ಕಂಡುಬಂದಿರುವ ಸಮಸ್ಯೆ. ಇಂದು ಇದೇ ಕಾರಣಕ್ಕೆ ಜರ್ಮನಿ ಮತ್ತು ಜಪಾನ್ ನಲ್ಲಿ ಇಂದಿಗೂ ಪ್ರಾಥಮಿಕ ಶಾಲೆಗಳು ಮಾತೃಭಾಷೆಯಲ್ಲಿಯೇ ಇದ್ದು ಇಂಗ್ಲೀಷ್ ಒಂದು ಬೇರೆಯೇ ವಿಷಯವಾಗಿ ಕಲಿಸಲ್ಪಡುತ್ತಿದೆ. ಇಂಗ್ಲೀಷಿನಲ್ಲಿ ಮಕ್ಕಳನ್ನು ಮುಳುಗಿಸಿದಾಕ್ಷಣ ಮಕ್ಕಳು ಇಂಗ್ಲೀಷನ್ನು ತಮ್ಮದಾಗಿಸಿಕೊಂಡುಬಿಡುತ್ತಾರೆ ಎನ್ನುವುದು ಸಾಧುವಲ್ಲ. ಒಬ್ಬ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ ಇಂಗ್ಲೀಷನ್ನು ಒಂದು ಪ್ರತ್ಯೇಕ ವಿಷಯವಾಗಿ ಕಲಿಯುವಾಗ ಅಲ್ಲಿ ಭಾಷಾ ಶುದ್ಧತೆಯ ಬಗ್ಗೆ ವಿಶೇಷ ಪ್ರಜ್ಞೆಯಿರುತ್ತದೆ. ಇದೇ ಕಾರಣಕ್ಕೆ ಇವತ್ತು ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ೧೨ನೇ ಕ್ಲಾಸ್ ಅಥವಾ ಸ್ನಾತಕ ಮುಗಿಸುವ ವೇಳೆ ಆಂಗ್ಲ ಮಾಧ್ಯಮದಲ್ಲಿ ಕಲಿತ ಕನ್ನಡಿಗನಿಗಿಂತ ಶುಧ್ಧ ಇಂಗ್ಲೀಷನ್ನು ಮಾತನಾಡುತ್ತಾನೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ ಶುಧ್ಧ ಇಂಗ್ಲೀಷನ್ನು ಆಂಗ್ಲ ಶಿಕ್ಷಕರಿಂದ ಮಾತ್ರ ಕೇಳುತ್ತಾನೆ, ಕಲಿಯುತ್ತಾನೆ.

ಅದು ಹಾಗಾದರೆ, ಕನ್ನಡ ಪ್ರೇಮಿಗಳಿಗೆ ಆಂಗ್ಲೆ ಪ್ರೇಮಿಗಳು ಹೀಗೂ ಹೇಳಬಹುದು, ಆಂಗ್ಲ ಮಾಧ್ಯಮದಲ್ಲಿ ಒಂದು ವಿಷಯವನ್ನು ಕನ್ನಡವನ್ನಾಗಿಸಿದರೆ ಶುದ್ಧ ಕನ್ನಡವನ್ನು ಮಕ್ಕಳು ಕಲಿತಾರು ಎಂದು. ಕನ್ನಡ ವಿಷಯವನ್ನು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಮುಖ್ಯವೆಂದು ಪರಿಗಣಿಸುವಂತೆ ಮಾಡಲು ಅಲ್ಲಿ ಕನ್ನಡದ Passing Marks ಹೆಚ್ಚು ಮಾಡಬಹುದು ಅಥವಾ ಕನ್ನಡ ವಿಷಯಕ್ಕೆ ಹೆಚ್ಚಿನ ಅಂಕವನ್ನಿಟ್ಟು ವಿದ್ಯಾರ್ಥಿಗಳು ಕನ್ನಡವನ್ನು ಮಹತ್ವದ ವಿಷಯವಾಗಿ ಪರಿಗಣಿಸುವಂತೆ ಮಾಡಬಹುದು. ಆದರೆ ಇಲ್ಲಿ ಮತ್ತೆ ನಾವು ಮೂಲ ಸಮಸ್ಯೆಗೆ ಮರಳುತ್ತೇವೆ, ಏಕೆಂದರೆ ಮಗು ವಿಚಾರ ಮಾಡುವುದು ತನ್ನ ಮಾತೃ ಭಾಷೆಯಲ್ಲಿಯೇ ವಿನಹ ಆಂಗ್ಲದಲ್ಲಲ್ಲ. ಇಲ್ಲೊಂದು ಗೊಂದಲದ ವಾತಾವರಣಕ್ಕೆ ಮಗುವನ್ನು ನಾವೇ ನೂಕಿದಂತೆ.

ನಮ್ಮಲ್ಲಿ ಇಂದಿನ ಭಾಗಶ: ಆಂಗ್ಲ ಮಾಧ್ಯಮ ಶಾಲೆಗಳು ಒಂದು ಸೈಕಾಲಾಜಿಯ ಮೇಲೆ ನಡೆಯುತ್ತಿವೆ. ಅಪ್ಪ ಅಥವಾ ಅಮ್ಮ ತನ್ನ ಆಂಗ್ಲ ಭಾಷೆಯಲ್ಲಿ ಮೊದಲ ಸಲ ವ್ಯವಹರಿಸುವಾಗ ಪಟ್ಟ ಅಲ್ಪಸಮಯದ ಕಷ್ಟ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವಂತೆ ಮಾಡಬಹುದು ಅಥವಾ ಬಹುತೇಕ ಕನ್ನಡ ಮಾಧ್ಯಮದಲ್ಲಿ ಆರ್ಥಿಕ ಪ್ರತ್ಯೇಕತೆ(economical separation) ಇಲ್ಲದಿರುವುದೇ ಹೆಚ್ಚು ಶುಲ್ಕ ಕೊಟ್ಟು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದಕ್ಕೆ ಕಾರಣವಿರಲೂಬಹುದು. ಸತ್ಯವನ್ನು ಒಪ್ಪಿಕೊಳ್ಳೋಣ. ಈ ಎರಡನೆಯ ಕಾರಣಕ್ಕೆ ಸರಕಾರ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಸರಕಾರದ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಸರಕಾರ ಜನರ ಸೈಕಾಲಾಜಿಯನ್ನು ಬದಲಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಸರಕಾರ ಹಾಗೊಮ್ಮೆ ಆಂಗ್ಲ ಮಾಧ್ಯಮವನ್ನು ಆರಂಭಿಸಿದ್ದೇ ಆದಲ್ಲಿ ಒಬ್ಬ ಈ ಮೇಲಿನ ಸೈಕಾಲಾಜಿ ಹೊಂದಿದ ಬಡವನೂ ಆಂಗ್ಲ ಮಾಧ್ಯಮಕ್ಕೆ ತನ್ನ ಮಕ್ಕಳನ್ನು ಕಳುಹಿಸಲು ಸಾಧ್ಯ. ಇಲ್ಲಿ ಕನ್ನಡದ ಉಳಿವು ಅಳಿವಿನ ಮಾತನ್ನು ಬಿಟ್ಟು ಬಡವನಿಗೂ ಆಂಗ್ಲ ಮಾಧ್ಯಮದ ಸೌಕರ್ಯ ಒದಗಿಸಲು ಸರಕಾರ ಮುಂದೆ ಬಂದಿರುವುದು ಒಂದು ದೃಷ್ಟಿಯಲ್ಲಿ ಸರಿಯೇ, ಏಕೆಂದರೆ ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಕನ್ನಡ ಉಳಿಸುವ ಹೊಣೆ ಏಕೆ?

ಇನ್ನು ಆಂಗ್ಲ ಮಾಧ್ಯಮದಿಂದ ಕನ್ನಡ ನಶಿಸಿಯೇ ಹೋಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತೆಯೂ ಇಲ್ಲ. ಕನ್ನಡಕ್ಕೆ ಪೆಟ್ಟಂತೂ ಹೌದು. ಭಾಷಾ ಇತಿಹಾಸವನ್ನು ನೋಡಿದರೆ ಯಾವ ಭಾಷೆ ಸುಲಭವೂ ಮತ್ತು ಬಳಕೆಯಲ್ಲಿ , ಸಾಹಿತ್ಯದಲ್ಲಿ ಬೆಳೆಯುತ್ತದೆಯೋ ಅದು ಬದುಕಿಕೊಳ್ಳುತ್ತದೆ, ಕ್ಲಿಷ್ಟವೆನ್ನುವುದು ನಷಿಸುತ್ತದೆ. ಇಂದು ಆಂಗ್ಲ ಭಾಷೆ ಜಗದ್ವ್ಯಾಪಿಯಾಗಲು ಅದರ ಸರಳತೆಯೂ ಒಂದು ಕಾರಣ. ಇಂದು ಸಾಹಿತಿಗಳು ಆಂಗ್ಲಮಾಧ್ಯಮವನ್ನು ಸರಕಾರವೇ ಆರಂಭಿಸುವುದನ್ನು ವಿರೋಧಿಸುತ್ತಿದ್ದಾರೆ. ಇಲ್ಲಿ ಕಾಗೇರಿಯವರು ಹೇಳುವಂತೆ ಸಾಹಿತಿಗಳು ಮಾತ್ರ ಪ್ರಜೆಗಳಲ್ಲ, ಒಪ್ಪೋಣ. ಆದರೆ ಸಾಹಿತಿಗಳು ಇಲ್ಲಿ ವಿರೋಧಿಸುವುದಕ್ಕೆ ಸಕಾರಣವಿದೆ. ಇಂದಿನ ಕನ್ನಡ ಸಹಿತ್ಯಾಸಕ್ತರಲ್ಲಿ ಅದೆಷ್ಟು ಮಂದಿ ಆಂಗ್ಲ ಮಾಧ್ಯಮದಲ್ಲಿ ಕಲಿತವರಿದ್ದಾರೆ ? ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವರಲ್ಲಿ ಬಹುಭಾಗ ಕನ್ನಡ ಸಾಹಿತ್ಯಾಸಕ್ತಿಯನ್ನು ಹೊಂದಿರುತ್ತಾರೆ, ಅಥವಾ ಸಹಿತ್ಯಾಸಕ್ತರಲ್ಲಿ ಬಹುಭಾಗ ಕನ್ನಡ ಮಾಧ್ಯಮದಲ್ಲಿ ಬೆಳೆದವರೇ ಆಗಿರುತ್ತಾರೆ ಮತ್ತು ಅವರಿಗೆ ಆಂಗ್ಲ ಸಹಿತ್ಯದ ರುಚಿಯೂ ತಿಳಿದಿರುತ್ತದೆ. ಆಂಗ್ಲ ಮಾಧ್ಯಮದಿಂದ ಕ್ರಮೇಣ ಓದುಗರ ಸಂಖ್ಯೆ , ಬರವಣಿಗೆಯ ಸಂಖ್ಯೆ ಕ್ಷೀಣಿಸುತ್ತಾ , ಆಂಗ್ಲದಷ್ಟು ಸರಳವಲ್ಲದ ಕೇವಲ ಕರ್ನಾಟಕದವರಷ್ಟೇ ಬಳಸುವ ಕನ್ನಡ ಸತ್ತೇ ಹೋಗಬಹುದು. ಸಾಯುವಾಗ ತನ್ನೊಟ್ಟಿಗೆ ಕನ್ನಡದ ಶ್ರೀಮಂತ ಸಂಸ್ಕೃತಿಯನ್ನೂ ಅದು ಹೊತ್ತೊಯ್ಯಬಹುದು.

ಇಷ್ಟಾಗಿಯೂ ಸರಕಾರ ಆಂಗ್ಲ ಮಾಧ್ಯಮವನ್ನು ತೆರೆಯುವ ವೇಳೆ, ಇಂದಿನ ಖಾಸಗೀ ಆಂಗ್ಲ ಶಾಲೆಗಳ ನ್ಯೂನತೆಯನ್ನು ಹೊಂದಿ ರೂಪಗೊಂಡ ಪಕ್ಷದಲ್ಲಿ ಅದೇನೂ ಪ್ರಯೋಜನವಾಗದು. ಕೇವಲ ಜನ ಬಯಸುತ್ತಾರೆ ಎಂಬ ಒಂದೇ ಕಾರಣಕ್ಕೆ ಯಾವುದೇ ಸರಕಾರ ಯಾವುದೇ ನಿರ್ಧಾರಕ್ಕೆ ಬರುವುದು ಸಮಂಜಸವಲ್ಲ ಯಾಕೆಂದರೆ ಆರಿಸಿದ ಸರಕಾರಕ್ಕೆ ಅದರದೇ ಆದ ಜವಾಬ್ಧಾರಿಗಳಿರುತ್ತದೆ. (ಇದೇ ಕಾರಣಕ್ಕೆ ನಮ್ಮ ಸಂವಿಧಾನದಲ್ಲಿ Emergency ಘೋಷಿಸಲೂ ಅವಕಾಶವಿದೆ.)

ಹಾಗಾದರೆ ಸರಕಾರ ಕನ್ನಡದ ಉಳಿವನ್ನು ಕಡೆಗಣಿಸಬೇಕೆ ? ಅಥವಾ ಎಲ್ಲವನ್ನು ಬಡಿಗಿಟ್ಟು ಜನರ ಆಜ್ಞೆಯಂತೆ ನಡೆಯಬೇಕೆ ? ಇದರ ಸಾಧಕ ಬಾಧಕ ಗಳೇನು ಎಂದು ಅರಿಯುವ ಅವಷ್ಯಕತೆಯಿಲ್ಲವೇ ? ನಮ್ಮದು ಭಾಷಾವಾರು ರಾಜ್ಯಗಳು. ಇಂದು ಬೆಳಗಾವಿಯಲ್ಲಿ ಕನ್ನಡೇತರ ಧ್ವನಿ ಕೇಳಿಸಿಕೊಳ್ಳಲು ಮೂಲ ಕಾರಣವೇನು ? ಒಂದು ರಾಜ್ಯದ ಕಲ್ಪನೆಯೇ ಭಾಷೆಯಮೇಲೆ ನಿಂತಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಷಕ್ಕೆ ವ್ಯತ್ಯಾಸವಿದೆ. ಮುಂದೊಮ್ಮೆ ಕನ್ನಡ ಕ್ಷೀಣಿಸಿದರೆ ನಮ್ಮ ರಾಜ್ಯವೇ ಮರೆಯಾಗಬಹುದು. ಭಾಷೆ ಕೇವಲ ವ್ರತ್ತಿಗೆ ಮಾತ್ರವಲ್ಲ. ಭಾಷೆ ನಿತ್ಯ ಜೀವನದ ಅವಷ್ಯಕತೆ. ಮೊದಲು ನಮ್ಮ ಮನೆ, ಊರು, ರಾಜ್ಯ, ದೇಶ – ಉಳಿದವೆಲ್ಲ ನಂತರ. ಇಂದಿನ ಪರಿಸ್ಥಿತಿಯಲ್ಲಿ ಇಂಗ್ಲೀಷ್ ನ ಅನಿವಾರ್ಯತೆಯಿದೆ ಆದರೆ ಇಂಗ್ಲೀಷೇ ಸರ್ವಸ್ವವಲ್ಲ. ನಮ್ಮತನ ಇರುವುದು ಕನ್ನಡದಲ್ಲಿ ಮಾತ್ರವೇ ಅಲ್ಲವೇ? ಭಾಷೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿಗೆ ವಿರುದ್ಧವಾದ ಯಾವುದೇ ನಡೆ ಜನರಾಸಿಯಾದರೂ ಸರಕಾರ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಲ್ಲವೇ? ಒಂದುಕಡೆ ಕನ್ನಡ – ಸಂಸ್ಕೃತಿ ಎಂದು ಕೋಟಿಗಟ್ಟಲೆ ಖರ್ಚುಮಾಡಿ ಅಧಿವೇಶನಗಳನ್ನು ಮಾಡಿ, ಈ ಕಡೆ ಇಂಥಹ ನಿರ್ಧಾರಕ್ಕೆ ಬಂದರೆ ಹೇಗೆ ? ’ಕನ್ನಡವನ್ನೂ ಕಲಿಯಿರಿ’ ಎನ್ನುವ ಸರಕಾರದ ಕಾಳಜಿಯನ್ನು ನಮ್ಮ ಹೈ-ಕೋರ್ಟ್ ’ಕನ್ನಡವನ್ನೇ ಕಲಿಯಿರಿ’ ಎಂದು ತಪ್ಪರ್ಥೈಸಿಸಿ ಯಾವುದೇ ಭಾಷೆಯನ್ನು enforce ಮಾಡುವಂತಿಲ್ಲವೆಂದಿತ್ತು. ಆದರೆ ಸರಕಾರ ಸಂಸ್ಕೃತಿಯ ಉಳಿವಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ತಪ್ಪೆ ? ಸಮಸ್ಯೆ ಬಂದಾಗ ಅಥವಾ ಬದಲಾವಣೆಗೊಳಪಡುವಾಗ ನಾವು ನಮ್ಮನ್ನು ಅರಿಯಬೇಕೆ ವಿನಹ ಇನ್ನೊಬ್ಬರನ್ನು ನಕಲು ಮಾಡುವುದು ಎಷ್ಟರ ಮಟ್ಟಿಗೆ ಸರಿಯೇ ? ಅಥವಾ ಇದೆಲ್ಲದರ ಹೊರತಾಗಿ ಏಕರೂಪ ಶಿಕ್ಷಣ ಜಾರಿ ತರುವುದು ಉತ್ತಮವೇ ? ಅಥವಾ ಇರುವ ಕನ್ನಡ ಮಾಧ್ಯಮ ಶಾಲೆಗಳೇ ಆಂಗ್ಲಕ್ಕೆ ಒತ್ತುಕೊಡುವಂತೆ ಪಠ್ಯವನ್ನು ರೂಪಿಸಿಲಾಗದೇ?

ಹೀಗೆ ಇವಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಸರಕಾರ ಒಂದು ಪ್ರೌಢ ನಿರ್ಧಾರಕ್ಕೆ ಬರುವ ಅವಷ್ಯಕತೆಯಿದೆ. ಸಂಸ್ಕೃತಿಯನ್ನೂ ಉಳಿಸಿಕೊಂಡು ಜನರ ಆಸೆಯನ್ನು ಈಡೇರಿಸುವುದು ಸರಕಾರದ ಕರ್ತವ್ಯವಾಗಿರುತ್ತದೆ. ನಿರ್ಧಾರ ಯಾವುದೇ ಪೂರ್ವಾಗ್ರಹ ಅಥವಾ ಕೇವಲ ಒಂದು ಗುಂಪಿನ ನಿರ್ಧಾರಕ್ಕೆ ಬಧ್ಧವಾಗಿರದೇ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿರಬೇಕಿರುವುದು ಅವಶ್ಯ ! ಇದು ಕನ್ನಡ ಮತ್ತು ಇಂಗ್ಲೀಷಿನ ಯುದ್ಧವಲ್ಲ ಅಥವಾ ಹೊಸತನ್ನು ಅಳವಡಿಸಿಕೊಳ್ಳಲು ಸಮಾನ್ಯವಾಗಿರುವ ಹಿಂಜರಿಕೆಯಲ್ಲ. ಇದು ಕನ್ನಡ vs ಇಂಗ್ಲೀಷ್ ಕ್ರಿಕೆಟ್ ಮ್ಯಾಚ್ ಅಲ್ಲವೇ ಅಲ್ಲ.
(Published in Kannada Prabha , dated 09th July 2011)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s