ಭೂತ ಭವಿಷ್ಯತ್ತಿನ ಮಧ್ಯೆ – ನಮಾಬಿ

AiÀiÁPÉ ನಮಗೆ ಸಂತೆಯಲ್ಲೂ ಒಂಟಿತನ ಕೆಲವೊಮ್ಮೆ ಕಾಡುತ್ತಿರುತ್ತದೆ? ಎಲ್ಲರೊಟ್ಟಿಗೆ ಕೂತಿರುತ್ತೇವೆ – ಮನಸ್ಸು ಒಂಟಿಯಾಗಿ ಬೇಸರಪಡುತ್ತಿರುತ್ತದೆ. ಪ್ರತೀದಿನವೂ ನಡಯುವ ದಾರಿ ಹೊಸತೆನಿಸುತ್ತದೆ. ಒಮ್ಮೊಮ್ಮೆ ದಾರಿ ಹೊಸತಾದರೂ ಯಾವುದೋ ಜನುಮದಲ್ಲಿ ಇಲ್ಲಿಗೆ ಬಂದಿದ್ದೆನೇನೋ ಎಂಬ ಮಳ್ಳು ಭ್ರಮೆ ಎಂದೆಲ್ಲಾ… ನನ್ನ ಹೆಸರು ನನಗೇಕೆ ಹೊಸತೆನಿಸುತ್ತಿದೆ.. ಹೀಗೆ ಮನಸ್ಸಿಗೆ ಬಂದದ್ದೆಲ್ಲಾ ವಿಚಾರ ಮಾಡುತ್ತ ತನ್ನದೇ ಆದ ಬಾಯಲ್ಲಿ ಬೇರೆ ಯಾರದೋ ನಾಲಿಗೆ ಎಂಬಂತೆ ಸವೆದ ಬಬ್ಬಲ್ ಗಮ್ ಅನ್ನು ಹಿಂಡುತ್ತ ‘ನಮಾಬಿ’ ಕಿಲ್ಲೆಪಟ್ಟಿಯ ರಸ್ತೆಯಲ್ಲಿ ನಡೆಯುತ್ತಿದ್ದ.

ಠ??ತ ಠ??ಿಷ್ಯತ್ತಿನ ಹೊಡೆದಾಟದಲ್ಲಿ

ಕಿಲ್ಲೆಪಟ್ಟಿ ನಮಾಬಿಗೆ ಹೊಸತೇನಲ್ಲ – ಆದರೆ ಯಾಕೋ ಈ ರಸ್ತೆ ಮತ್ತು ತನ್ನ ಹೆಸರನ್ನು ನೆನೆಸಿಕೊಂಡರೆ ಗಾಬರಿಗೊಂಡವನಂತಾಗಿ ಹಿಂದಿನಿಂದ ಶಬ್ಧ ಮಾಡಿಕೊಂಡು ಬಂದ ನೀಲಿ ಬಸ್ಸು ತನ್ನನ್ನೇ ಗುರಿಯನ್ನಗಿಸಿ ಬರುತ್ತಿದೆಯೇನೋ ಎಂದು ಅನುಮಾನಗೊಂಡು ಇನ್ನಷ್ಟು ಗಾಬರಿಗೊಂಡ. ರಸ್ತೆಯ ಎಡಕ್ಕೆ ಸರಿಯಲು ತನ್ನ ಇಂದ್ರೀಯಗಳು ಒತ್ತಯಿಸುತ್ತಿವೆ ಎಂದೆನಿಸಿ ಎಡಗಾಲನ್ನು ಎತ್ತಿ ಕೊಂಚ ಎಡಕ್ಕೆ ಎತ್ತಿಹಾಕಬೇಕು.. ಸಗಣಿ ಕಂಡಂತಾಗಿ ಬಲಗಾಲನ್ನು ಎತ್ತಿ ಎಡಕ್ಕೆ ಹಾರಿದ. ಮತ್ತೆ ತನ್ನ ಹಿಂದೆ ಬಸ್ಸು ಬರುತ್ತಿರುವುದು ನೆನಪಾಗಿ ಮತ್ತೆ ಬಲಕ್ಕೆ,, ಸ್ವಲ್ಪ ಮುಂದಕ್ಕೆ ಹೋದ ನಂತರ ಹಿಂದೆ ರಸ್ತೆಯಲ್ಲಿದ್ದದ್ದೇನು ಎಂದು ತಿರುಗಿ ನೋಡಿ ಕರಿಯ ಪ್ಲ್ಯಾಸ್ಟಿಕ್ ಅನ್ನು ಸಗಣಿಯಾಗಿಸೆ ನನ್ನನ್ನು ಈಕಡೆ-ಆ ಕಡೆ ಹಾರಾಡುವಂತೆ ಮಾಡಿದ ತನ್ನ ಐದಾರು ಇಂದ್ರಿಯಗಳಲ್ಲಿ ಒಂದೆರಡನ್ನು ಶಪಿಸಿದ..”ತಥ್ ತೆರಿ ಮಾಕಿ…”.. ನೀಲಿ ಬಸ್ಸು ಈತನ ಹಿಂದೆಯೇ ಇನ್ನಷ್ಟು ಸಮೀಪಿಸಿತು. ಹಿಂದಿರುಗಿ ನೋಡಬೇಕು – “ಗ್ರೂಂಕ್ ಗ್ರೂಂಕ್” ಬ್ರೇಕ್ ಶಬ್ಧ ಗ್ರಹಿಸಿ ಕೊಂಚ ಸಮಾಧಾನಗೊಂಡವನಂತಾಗಿ ನಮಾಬಿ ಇನ್ನಷ್ಟು  ಮುಂದಕ್ಕೆ ನಡೆದ.
ನಿಂತ ನೀಲಿ ಬಸ್ಸು ಮತ್ತೆ ತನ್ನ ಕಾಯಕ ಮುಂದವರಿಸಿ ನಮಾಬಿಯ ಸುತ್ತಲೂ ಧೂಳಿನ ಮೊಡವನ್ನು ಹರಡಿ ಮುಂದಕ್ಕೆ ಸಾಗಿದಾಗ ಯಾಕೋ ನಮಾಬಿ ನಮಾಬಿಯಾದ..ಧೂಳು ಬಾಯಿ ಮೂಗು ಎಂಬಿತ್ಯಾದಿ ರಂದ್ರಗಳೊಳಕ್ಕೆ ಅಂದರ್ ಬಾಹರ್ ಆಡಿದವು. ಧೂಳಿನಿಂದ ಕಿರುನಾಲಗೆ ಒಣಗಿದಂತಾಗಿ ಒಮ್ಮೆ ಕ್ಯಾಕರಿಸಿದ. ಇನ್ನೇನು ಉಗಿಯಬೇಕು – ಎದುರುಗಡೆ ಬರುತ್ತಿದ್ದ ಜೀನ್ಸ್ ಪ್ಯಾಂಟಿನ ಹುಡುಗಿಯನ್ನು ನೋಡಿ ತನ್ನ ಹಳದಿ ಮಿಶ್ರಿತ ಹಪ್ಪಳದಂಥಹ ಕಫವನ್ನು ಹಾಗೆಯೇ ಬಾಯಲ್ಲಿಟ್ಟು ಅವಳನ್ನು ದಾಟಿದ ಮೇಲೆ “ಛೂತಿಯ ಗೊರ್ಮೆಂಟು  ನಾವು ಸಿಗ್ರೇಟು ಹೊಡ್ದ್ರು ಟ್ಯಾಕ್ಸು – ಗುಂಡು ಹಾಕಿದ್ರು ಟ್ಯಾಕ್ಸು – ಒಂದ್ ರೋಡ್ ನೆಟ್ಗ್ ಮಡ್ಸಾಕಾಗಾಕಿಲ್ಲ!” ಎಂದೇನೋ ವಿಚಾರ ಲಹರಿಯಲ್ಲಿ ಬಾಯಲ್ಲಿದ್ದ ಕಫವನ್ನು ಉಗಿಯದೇ ನುಂಗಿಕೊಂಡ.ಮತ್ತೊಮ್ಮೆ ಕ್ಯಾಕರಿಸಿ ಗಟ್ಟಿಯಾಗಿ ಎಡಕ್ಕೆ ಮುಖಮಾಡಿ ಉಗಿದ. ಉಗಿದದ್ದು ರೋಡಿನ ಗಟಾರದ ಆಚೆಯಿದ್ದ ಅಪಾರ್ಟ್ಮೆಂಟಿನ ಗೋಡೆಗೆ ಹಚ್ಚಿದ ಫಿಲ್ಮಿನ ಪೋಸ್ಟರ್ ಗೆ ಹೊಗಿ ಅಂಟಿ ಕೊಂಚ ಕೆಳಗೆ ಇಳಿಯಿತು. ಅದನ್ನು ನೋಡಿ ಹೆಮ್ಮೆಪಟ್ಟ.. ಯಾಕೋ ನಮಾಬಿಗೇ ಗೊತ್ತು.

ನಮಾಬಿಯ ಗುರಿಯಿಲ್ಲದ ನಡಿಗೆ ಛೂತಿಯಾ ಗವರ್ಮೆಂಟಿನ ಪ್ರಗತಿಪಥದಂತೆ. ಮತ್ತೆ ನಮಾಬಿಯ ಮನಸ್ಸು ಐದು ನಿಮಿಷದ ಹಿಂದಕ್ಕೆ ಹೋಗಬೇಕು ಎಂದಾಗ ರಸ್ತೆಯ ಪಕ್ಕದ ಗಟಾರ ಮತ್ತು ಅಪಾರ್ಟ್ಮೆಂಟಿನ ನಡುವಿನ ದಿಬ್ಬದಲ್ಲಿ ಒಂದು ಮಗು ಇನ್ನೊಂದೆರಡು ಮಕ್ಕಳೊಂದಿಗೆ ಆಡುತ್ತಿದ್ದುದು ಕಣ್ಣಿಗೆ ಬಿತ್ತು. “ಯೆ ಹೆ ಹಮಾರ ಭಾರತ್ ” ಎಂಬ ಡೈಲಾಗು ಮನಸ್ಸಿನಲ್ಲಿ ಪಟ್ಟನೆ ಹಾದು ಮರೆಯಾಯಿತು. ಅಬ್ಬಾ ವಿಚಾರವಾದಿ ನಮಾಬಿ ಎಂದು ಹೆಮ್ಮೆ ಪಟ್ಟ!!!

ನೀಲಿಯ ಬಸ್ಸಿನ “ಗ್ರೂಂಕ್ ಗ್ರೂಂಕ್” ಬ್ರೇಕಿನಂತೆ ಆ ದೃಶ್ಯ ನಮಾಬಿಯನ್ನು ಹಿಡಿದು ನಿಲ್ಲಿಸಿತು. ನಮಾಬಿಯ ಮನಸ್ಸಿಗೆ ಇದೊಂದು ಸ್ಟಾಪು – ಇಲ್ಲಿ ಕೆಲವನ್ನು ಇಳಿಸಿ  – ಇನ್ನು ಕೆಲವನ್ನು ಹತ್ತಿಸಿಕೊಂಡು ಹೋಗಬೇಕು ಎಂಬ ಕರ್ತವ್ಯಪ್ರಜ್ನೆ ಆದಂತಾಗಿ ಒಮ್ಮೆಯೇ ನಿಲ್ಲಿಸಿಬಿಟ್ಟಿತು. ಅದೇಕ್ಷಣ ಅದೇನೋ ಅನುಮಾನದಿಂದ ಒಮ್ಮೆ ಹಿಂದಕ್ಕೆ ತಿರುಗಿ ನೋಡಿದ ನಮಾಬಿ ತನ್ನ ಎಡಗಾಲಿನ ಚಪ್ಪಲಿಯ ಅಡಿಯನ್ನು ನೋಡಿ ಮತ್ತೆ ಬಲಗಾಲ ಚಪ್ಪಲಿಯ ಅಡಿಯನ್ನು ನೋಡಿಕೊಂಡು ಏನನ್ನೂ ಮೆಟ್ಟಿಲ್ಲ  ಎಂದು ಸಮಾಧಾನಗೊಂಡು ಆ ಕರಿಯ ಮಗುವಿನತ್ತ ನೋಡಿದ.

ಆ ಬೇಡುವ ವಂಶದ ಕುಡಿಗಳು ಅವರಲ್ಲಿಯೇ ಏನನ್ನೋ ಮಾತಾಡುತ್ತಿದ್ದವು – ಬೈದುಕೊಳ್ಳುತ್ತಿದ್ದವು. ಅವುಗಳ ಭಾಷೆ ಯಾವುದು ಎಂಬ ಕುತೂಹಲ ನಮಾಬಿಯನ್ನು ಕೆಣಕಿ ತನ್ನ ಕತ್ತನ್ನು ವಾಲಿಸಿ ಆಲಿಸುವಂತೆ ಮಾಡಿತು. ಅವು ಅವುಗಳಲ್ಲೇ ಯವುದೋ ಅಜ್ಞಾತ  ಭಾಷೆಯಲ್ಲಿ ಮಾತಡುತ್ತ – ಬೈದಾದುಕೊಳ್ಳುವಂತೆ ಕಿರಿಚಾಡುತ್ತಿದ್ದವು. ಅವು ಮಾತಾಡುವುದನ್ನು ಗ್ರಹಿಸಿದ ನಮಾಬಿ  – ಇವು ನನಗೆ ತಿಳಿದ  – ಹತ್ತು ರೂಪಾಯಿಯ ನೋಟಿನ ಮೇಲಿನ ‘ಹತ್ತು ರೂಪಾಯಿಗಳು’ ಎಂದು ಬರೆದ ಹದಿನೈದು ಭಾಷೆಗಳಲ್ಲಿ ಯವುದೂ ಅಲ್ಲ ಎಂದೆನಿಸಿತು. ಇವರ ಈ ಅಜ್ನಾತ ಭಾಷೆಯ ಮೂಲ ಆಫ್ರಿಕಾದ ಕಾಡುಗಳ ಯವುದೋ ನದಿಯ  ಪಕ್ಕದ ಗುಡ್ಡದ ತಪ್ಪಲಿರಬೇಕು ಎಂದೆನಿಸಿತು. ನಮಾಬಿಗೆ ಮಕ್ಕಳ ಪ್ರತಿಯೊಂದು ಶಬ್ಧ-ವಾಕ್ಯವೂ ‘ದ ವಿನ್ಸಿ ಕೋಡ್’ ಎಂದೆನಿಸಿತು. ಒಮ್ಮೆ “ಹಯ್ಯ್..” ಎಂದ. ಮರುಕ್ಷಣವೇ ನಾನ್ನ್ಯಾಕೆ ಈಗ “ಹಯ್ಯ್..” ಅಂದದ್ದು ಎಂದು ಮನಸ್ಸು ಪ್ರಶ್ನೆ ಕೇಳಿದ್ದನ್ನು “ಹೆತ್ ಇಸ್ಕಿ..” ಎಂದು ಸುಮ್ಮನಾದ.

ಆ ಕಪ್ಪು ಮಗುವಿನ ಇಡೀಯ ದೇಹದಲ್ಲಿ ಆಭರಣ ಎಂಬಂತೆ ಸೊಂಟಕ್ಕೆ ಮೂರು-ನಾಲ್ಕು ಗಂಟುಳ್ಳ ನೀಲಿಬಸ್ಸಿನ ಧೂಳು ಹಿಡಿದ ನಂಬರ್ ಬೋರ್ಡ್-ನ ಬಣ್ಣದ ದಾರ ನಮಾಬಿಯನ್ನು – ಆತನ ಕಣ್ಣನ್ನು ಸೆಳೆಯಿತು.  ಮಗುವಿನ ಕುಂಡೆಗೆ ಸ್ವಲ್ಪ ಮಣ್ಣು ಎರಡು-ಮೂರು ಕಲ್ಲುಗಳು ಅಂಟಿದ್ದವು. ತನ್ನ ಮೂಗಿನಲ್ಲಿ ಕೈ ಹಾಕಿ ಅದನ್ನು ಕುಂಡೆಗೆ ಒರಸಿತು. ಆಗ ಕಲ್ಲೆರಡು ಉದುರಿತಲ್ಲದೆ ಧೂಮಕೇತುವಿನ ಆಕೃತಿಯಲ್ಲಿ ಸುಂಬಳ ಬಡಿಯಿತು.  ಅಷ್ಟರಲ್ಲಿ ರಸ್ತೆಯಲ್ಲಿ ಹಿಂದಿನಿಂದ ಮತ್ತೆ ಬಸ್ಸಿನ ಶಬ್ಧ – ಆ ಶಬ್ಧವನ್ನು ಕೇಳಿದ ನಮಾಬಿಯ ಮನಸ್ಸಿನಲ್ಲಿ ‘ಗೌರವ-ಮರ್ಯಾದಿ’ ಇವೇ ಮೊದಲಾದ ಶಬ್ಧಗಳು ಬಸ್ಸಿನ ಶಬ್ಧದೊಂದಿಗೆ ವಿಲೀನವಾಗಿ ತಿರುಗಿನಿಲ್ಲುವಂತೆ ಮಾಡಿತು. ರಸ್ತೆಯ ಕಡೆ ಮುಖ. ಸ್ವಲ್ಪವೇ ದೂರದಲ್ಲಿ ಬರುತ್ತಿದ್ದ ಬಸ್ಸು-ಅದರ ಹಿಂದೆಯೇ ಬಸ್ಸನ್ನು ಓಡಿಸಿಕೊಂಡು ಬರುತ್ತಿರುವ ಧೂಳು ಇವನ್ನು ನೋಡಿ ತನ್ನ ಅಂಗಿಯನ್ನು ಆಗಲೇ ಕುಡುಗಿ ಎಲ್ಲದಕ್ಕೂ ರೆಡಿಯಾದ. ಬಸ್ಸು ಇನ್ನಷ್ಟು ಸಮೀಪಿಸಿತು. ನಮಾಬಿ ತಾನು ಬಸ್ಸಿಗಾಗಿ ಕಾಯುತ್ತಿಲ್ಲ ಎಂಬುದನ್ನು ತೋರಿಸಿಕೊಳ್ಳದಿದ್ದರೆ ಬಸ್ಸು ನಿಂತು ಡ್ರೈವರ್-ಕಂಡಕ್ಟರುಗಳ ಕೈಲಿ ಉಗಿಸಿಕೊಳ್ಳುವುದು ಖಂಡಿತವಾಗಿತ್ತೇನೊ. ಎಡಕ್ಕೆ ತಿರುಗಿದ-ಮತ್ತೆ  ಬಲ ಹೆಬ್ಬೆರಳಿಂದ ತನ್ನ ವಾಚನ್ನು ಒರಸಿ ಒಮ್ಮೆ ಸರಿಯಾಗಿ ನೋಡಿಕೊಂಡ. ಇದೆಲ್ಲದರ ಮಧ್ಯೆ ಅವನ ಮುಖ-ದೇಹಗಳೆರಡು ಬಸ್ಸಿನತ್ತವೇ ತಿರುಗಿಕೊಂಡದ್ದು ಅವನ ಗಮನಕ್ಕೇ ಬಂದಿರಲಿಲ್ಲ. ಸೆಕೆಂಡಿನ ಮುಳ್ಳನ್ನು ನೋಡಿ ಅದರೊಳಗೆ ಬರೆದ ‘ಟೈಟನ್’ ಹೆಸರನ್ನು ಗಟ್ಟಿಯಾಗಿ ಒಮ್ಮೆ ಓದಿಕೊಂಡ..

ನೀಲಿಬಸ್ಸಿನ ಖಾಕಿ ಡ್ರೈವರು-ನಮಾಬಿಯನ್ನು-ಆತ ವಾಚು ನೋಡುತ್ತಿರುವುದನ್ನು ನೋಡಿ ಈತ ಬಸ್ಸಿಗೇ ಕಾಯುತ್ತಿದ್ದಾನೆ ಎಂದು ಮನುಷ್ಯನ ಸೈಕಾಲಜಿಯನ್ನೇ ಅರಿತವನಂತೆ ಬ್ರೇಕ್ ಒತ್ತಿ ಬಸ್ಸನ್ನು ಕೂಗಿಸಿದ. ಬಸ್ಸು ನಿಧಾನಗೊಳ್ಳುತ್ತ  ಕೂಗಿದ್ದೇ ತಡ ನಮಾಬಿ ಇನ್ನಷ್ಟು ಗಾಬರಿಗೊಂಡ. ತಲೆಯನ್ನು ಅಡ್ಡಕ್ಕೆ ಅಲ್ಲಾಡಿಸಿ – ಕೈಯ್ಯಲ್ಲಿ ‘ಮುಂದಕ್ಕೆ ಹೋಗು’ ಎಂದು ಸನ್ನೆ ಮಾಡಿದ. ಖಾಕಿ ಅಂಗಿ ತನ್ನ ಸೈಕಲಾಜಿ ಫೇಲ್ ಆಗಿದ್ದನ್ನು ನೋಡಿ ನಮಾಬಿಯತ್ತ ‘ಥೂ ಎನೋ..’ ಇವೇ ಮೊದಲಾದ ಶಬ್ಧಗಳನ್ನು ತನ್ನ ದೇಹದ ಮುಖ-ಕೈಗಳಿಂದ ಹೊರಹಾಕಿ ಗೇರ್ ಚೇಂಜ್ ಮಾಡಿ – ಎಕ್ಸಲೇಟರ್ ಒತ್ತಿ ಮುನ್ನಡೆದ. ಇದೆಲ್ಲದ್ದಕ್ಕಿಂತ ನಮಾಬಿಗೆ ಉರಿದುಹೋದದ್ದು ಕಂಡಕ್ಟರ್ರು ಗಾಡಿಯಿಂದ ಹೊರಗೆ ಕೈ ಹಾಕಿ ‘ಲೋ..’ ಎಂಬಂತೆ ತನ್ನ ಭಾವವನ್ನು ತೋರಿಸಿದ್ದು.  ಐವತ್ತು-ಅರವತ್ತು ಜನರ ಎದುರಿಗೆ ಮಾನ ಹರಾಜಾದದ್ದು..! ಕ್ಷಣ ನಂತರ ತಾನು ಬಾಯಿಬಿಟ್ಟು ಬೈದೆನೋ ಅಥವಾ ಮನಸ್ಸಿನಲ್ಲೇ ಬೈದುಕೊಂಡೆನೋ ಅಥವಾ ಬೈಯ್ಯಲೇಇಲ್ಲವೋ?? ತನಗಾದ ಅವಮಾನ(!)ವನ್ನು ಸಹಿಸದೇ ಕೊನೆಗೊಮ್ಮೆ ‘ಛೂತಿಯಾ..’ ಎಂದು ಗಟ್ಟಿಯಾಗಿ ಬೈದೇಬಿಟ್ಟ-ಸಮಾಧಾನಗೊಂಡ. ಮತ್ತೆ ಎನೋ ನೆನಪಾದಂತಾಗಿ ಕರಿಯ ಹುಡುಗನತ್ತ ತಿರುಗಿದ – ಮನಸ್ಸು ತನ್ನ ಬಾಲ್ಯದತ್ತ ಹೊರಳಿತು-ಕಣ್ಣಲ್ಲಿ ಅಗೋಚರ ನೀರು-ಒದ್ದೆ ಒದ್ದೆ. ಮಾದಜ್ಜ ನನ್ನನ್ನು ಆ ದಿನ ಎತ್ತಿಕೊಳ್ಳುವಾಗ ನನ್ನ ಕುಂಡೆಗೆ ಅಂಟಿದ್ದ ಮಣ್ಣು ಕಲ್ಲುಗಳನ್ನು ಗ್ರಹಿಸಿ ಹೇಸಿಕೊಳ್ಳಲಿಲ್ಲವೇನೊ..ಮಾದಜ್ಜನ ಕಣ್ಣಿನ ಕೆಂಪು ಕೆಂಪು ನರಗಳು ಮತ್ತು ಗಬ್ಬು ಬೀಡಿಯ ವಾಸನೆ ತುಂಬಾ ಹಿತವೆನ್ನಿಸಿತ್ತು-ಈಗಲೂ ನಮಾಬಿಗೆ ಬೀಡಿಯ ಗಬ್ಬು ಕಣ್ಣಲ್ಲಿ ನೀರು ತರಿಸುತ್ತಿತ್ತು. ನಮಾಬಿಯ ಮನಸ್ಸಿಗೆ  ಇವತ್ತಿಗೂ ತಾನೊಬ್ಬ ಅಜ್ಞಾತ ಮೂಲದ ಜೀವ ಎಂದು ಯೋಚಿಸಲೂ ಹೆದರಿಕೆಯಾಗುತ್ತಿತ್ತು. ನಮಾಬಿಗೆ ಆ ಹುಡುಗ ಈಗ ಅವನ ಭೂತ; ಭೂತ-ಕನ್ನಡಿ. ನಮಾಬಿ ಅದೆಷ್ಟೋಬಾರಿ ‘ನದಿ ಮೂಲ – ಸ್ತ್ರೀ ಮೂಲ ಎಂಬ ವಾಕ್ಯ ಕೇಳಿದಾಗ ಹೆದರುತ್ತಿದ್ದ.. ಇವೆರಡು ಪ್ರಶ್ನೆಗಳಿಗೆ ಹತ್ತಿರದ್ದು ತನ್ನ ಮೂಲದ ಪ್ರಶ್ನೆ.. ಈ ಮೂಲದ ಪ್ರಶ್ನೆ ಅವನ ಪಾಲಿಗೆ ‘ಜವಳೆ’ಯಂತೆ ..ಏತನ್ಮಧ್ಯೆ ಮಾದಜ್ಜನಿಗೆ ಮನಸ್ಸಿನಲ್ಲೇ ನಮಿಸಿದ.

ಹಿಂದಿನಿಂದ ಹಳೆಯ-ಹರಿದ ಪ್ಯಾರಾಗನ್ ಚಪ್ಪಲಿಯ ಸದ್ದು ಹತ್ತಿರವಾಗುತ್ತಿದ್ದುದನ್ನು ಗ್ರಹಿಸಿ – ಹಿಂದಕ್ಕೆ ಹೊರಳಿದ ನಮಾಬಿ ಆ ಚಪ್ಪಲಿಯ ಮೇಲಿದ್ದ ಮುದಿದೇಹವನ್ನು ಎರಡೇ ಕ್ಷಣದಲ್ಲಿ ಅವಲೋಕಿಸಿದ. ಚರ್ಮ ಸುಕ್ಕು ಸುಕ್ಕು-ಜೋಲುತ್ತಿತ್ತು. ಆ ಮುದಿಅಜ್ಜನ ಅಂಗಿಯ ಮಾಸಲು ಬಣ್ಣ ಆತನ ಇಡೀ-ಜೀವನದ ಅನುಭವ-ಧ್ಯಾನ ಇವಕ್ಕೆಲ್ಲ ಸಾಕ್ಷಿ ಎಂದೆನ್ನಿಸಿತು ನಮಾಬಿಗೆ. ಇಲ್ಲಿಯತನಕ ಭೂತದಲ್ಲಿ ಸೋತ ಮನಸ್ಸು ಆ ಅಜ್ಜ-ಆತನ ಹಳೆಯ ಕೆಂಪಾದ ‘ಸ್ಟಾರ್ ಗುಟ್ಕಾ’ದ ಜೋಳಿಗೆ-ಆ ಮಸುಕು ಮಾಸಲು ಅಂಗಿ ಇವೇ ಮೊದಲಾದವುಗಳಲ್ಲಿ ತನ್ನ ಭವಿಷ್ಯವನ್ನು ಕಾಣತೊಡಗಿದಾಗ ಮನಸ್ಸಿಗೆ ಸಂಪೂರ್ಣ ಶರಣಾದ. ಹೌದು, ಎಷ್ಟೇ ವಿಚಾರ ಮಾಡಿದರೂ ಜೀವನದಲ್ಲಿ ಒಂದು ಗುರಿಯನ್ನು ಹುಡಿಕಿಕೊಳ್ಳದಾದ-ಯರಾದರೂ ಒಂದು ಗುರಿಯನ್ನು ಹೇಳಿದರೆ ಅದನ್ನಾದರೂ ಸಧಿಸಬಹುದಿತ್ತು…ಯಾರ ಕೇಳಲಿ ಎಂದು ಅದೆಷ್ಟೋಬಾರಿ ಖಿನ್ನನಾಗಿದ್ದ. ಈ ಕಿಲ್ಲೆಪಟ್ಟಿಯ ರಸ್ತೆ – ನೀಲಿಬಸ್ಸು-ಕರಿಯ ಹುಡುಗ-ಮುದಿ ಅಜ್ಜ – ನನ್ನ ಮನಸ್ಸನ್ನು ಯಾಕಿಷ್ಟು ಹಿಂಡಿ ರಸಹೀನನ್ನಗಿಸುತ್ತಿವೆ?.. ಉತ್ತರ ಕಾಣದಾದ. ನಮಾಬಿಯ ಮನಸ್ಸು ಪ್ರತಿಯೊಂದು ದೃಷ್ಯದಲ್ಲೂ ತನ್ನನ್ನು-ತನ್ನ ಭೂತ ಭವಿಷ್ಯತ್ತನ್ನು ಹುಡುಕಿ ಆತನನ್ನೇ ಹಿಂಸಿಸುತ್ತಿತ್ತು. ಈ  ಭೂತ-ಭವಿಷ್ಯತ್ತಿನ ಹೊಡೆದಾಟದ ಮಧ್ಯೆ ನಮಾಬಿ ಎಂಬ ವರ್ತಮಾನ…..

Advertisements

One thought on “ಭೂತ ಭವಿಷ್ಯತ್ತಿನ ಮಧ್ಯೆ – ನಮಾಬಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s