ಕಾಡತೂಸು

ಮಾದೇವ ಅದ್ಯಾವಾಗ ಗಾಡಿಮಾದೇವನಾದ ಎನ್ನುವುದು ಸ್ವಂತ ಎತ್ತಿನಗಾಡಿಗೇ ತಿಳಿದಿಲ್ಲವೆನ್ನುವುದು ಸತ್ಯ-ನಿಜ. ಗಾಡಿ ಮತ್ತು ಮಾದೇವ ಇವೆರಡೂ ಒಂದನ್ನೊಂದು ಬಿಟ್ಟು ಬದುಕಲಾರದಷ್ಟು. ಒಂದರಿಂದ ಒಂದು ಬೇರ್ಪಡಿಸಿದರೆ ಎರಡೂ ಅರ್ಥ ಕಳೆದುಕೊಳ್ಳುತ್ತಿದ್ದವು – ಅಥವಾ ಬೇರೆಯದೇ ಆದ ಅರ್ಥ ಪಡೆದು ಅದ್ಯಾವುದೋ ಬೇರೆಯದೇ ಆದ ವ್ಯಕ್ತಿತ್ವ ರೂಪುಗೊಳ್ಳುತ್ತಿತ್ತು. ಹೀಗೆ ಒಂದೇ ಪದವಾಗಿ-ಜೀವವಾಗಿ ಬದುಕುತ್ತಿದ್ದರೂ ಗಾಡಿಮಾದೇವ ಎಂದಾಕ್ಷಣ ಒಂದು ಮನುಷ್ಯಾಕೃತಿಯನ್ನು ಹೋಲುವ ಜೀವ ಮನಸ್ಸಲ್ಲಿ ಹಾದು ಹೋಗುತ್ತಿತ್ತು ಇಡೀ ಮೂರೂರಿನ ಜನರಿಗೆಲ್ಲ. ಅದ್ಯಾವುದೋ ಗಾವುದ ದೂರದಲ್ಲಿ ಅವನ ಎತ್ತಿನ ಗಾಡಿ ಹುಲ್ಲನ್ನೂ ಅಥವಾ ತೆರಕನ್ನೋ-ಒಣ ಎಲೆಯನ್ನೋ ಹೊತ್ತು ಅದೆಷ್ಟೊ ದಿನ ಸ್ನಾನವೇ ಮಾಡದ ಬೇಡುವವನ ತಲೆಯ ಕೂದಲಂತೆ ಕೆಬರಿಕೊಂಡು ಬರುತ್ತಿದ್ದರೆ ಮೂರೂರಿನ ಗುಡ್ಡಗಳಲ್ಲಿ ಅವನ ಗಾಡಿಯ ಕುಂಟೆಯ ಶಬ್ಧ ಅಲೆ-ಅಲೆಯಾಗಿ ಮರುಧ್ವನಿ-ಪ್ರತಿಧ್ವನಿ ಇತ್ಯಾದಿಯಾಗಿ ಕೇರಿಯ ಮಕ್ಕಳಲ್ಲೆಲ್ಲ ಒಂದು ರೀತಿಯ ಜಾಗ್ರತಿಯನ್ನು ಅಲೆಯನ್ನು ಎಬ್ಬಿಸಿಬಿಡುತ್ತಿತ್ತು – ಮಕ್ಕಳೆಲ್ಲ “ಅಯೀ ’ಗಾಡಿಮಾದೇವನ ಗಾಡಿ..’ ನಾ ರಸ್ತೆವರೆಗೆ ಹೋಗ್ಬತ್ನೆ…” ಎಂದು ಓಡಿ ಓಡಿ ಎಲ್ಲ ರಸ್ತೆಯಂಚಿನಲ್ಲಿ ಬಂದು ನಿಲ್ಲುತ್ತಿದ್ದರು. ಮಕ್ಕಳಿಗೆಲ್ಲ ಗಾಡಿಯ ವಾಲುವಿಕೆ – ಶಬ್ಧ ಪ್ರತಿಯೊಂದೂ ಅದೇನೋ ಒಂದು ಮಧುರ ಅನುಭವದಂತೆ. ’ಗಾಡಿಮಾದೇವಾ… ಯೆಲ್ಲಿಗೆ ಹೊತೆ ಇದ್ದೆ ನೀನು…!! ..” ಮಕ್ಕಳ ಪ್ರಶ್ನೆಗಳಿಗೆ ಅವನೂ ಸರಿಯಾಗೇ ಉತ್ತರಿಸುತ್ತಿದ್ದ. ದೊಡ್ ಹೆಗ್ಡೇರ್ಮನೆಗೆ ಹೋಗಿ ಹುಲ್ಲು ಹಾಕಿಕ್ಕಿ ಬತ್ತೆ – ಗಾಡಿ ವಜ್ಜೆ ಅದೆ, ಹಿಂದೆ ಜೋತ್ ಹಾಕ್ಬೆಡಿ.. ಘಟ್ಟ– ಮೂಕ್ ಹಾರ್ತದೆ”. ಮಕ್ಕಳೆಲ್ಲರಿಗೂ ಅದೊಂದು ಖುಷಿ-ಮೋಜು. ಗಾಡಿ ಮುಂದೆ ಹೋಗುತ್ತಿದ್ದರೆ ಅದರ ಹಿಂದೆ ಇಳಿಬಿಟ್ಟ ಕೋಲಿಗೋ-ಬಳ್ಳಿಗೋ ಜೋತು ಬೀಳುತ್ತಿದ್ದರು. ಅದೊಂದು ಮಜ. ಸಿಕ್ಕಿದ್ದನ್ನು ಹಿಡಿದು ಜೋತು ಹಾಕಿ ಸುಮಾರು ದೂರ ಹೋಗುತ್ತಿದ್ದರು. ಈ ಇವರ ಮಜ ಗಾಡಿ ಮಾದೇವನಿಗೆ ಅದೆಷ್ಟು ಪಿಕಲಾಟಕ್ಕು ತಂದುನಿಲ್ಲಿಸುತ್ತಿತ್ತೆಂದರೆ ಒಮ್ಮೊಮ್ಮೆ ಹಿಂದೆ ಜೂತುಬಿದ್ದ ಮಕ್ಕಳ ಸಂಖ್ಯೆ ಜಾಸ್ತಿಯಾಗಿ ಭಾರ ಜಾಸ್ತಿಯಾಗಿ ಘಟ್ಟದಲ್ಲಿ ಎತ್ತಿನ ಗಾಡಿಯ ಮುಂಭಾಗವನ್ನೇ ಎತ್ತಿ ಸರ್ವ ಸಮತೋಲನವನ್ನು ಬಿಗಡಾಯಿಸಿಬಿಡುತ್ತಿತ್ತು. ಎತ್ತಿಗೆ ಕಟ್ಟಲ್ಪಟ್ಟ ನೊಗ ಮೇಲಕ್ಕೆ ಎತ್ತಿ – ಎತ್ತು ನೇರ ನಡೆಯದೇ ಅಡ್ಡ ಘಟಾರದತ್ತ ಗಾಡಿಯನ್ನು ಎಳೆದುಕೊಂಡು ಹೋಗಿಬಿಡುತ್ತಿತ್ತು. ಗಾಡಿಯಲ್ಲಿ ಕೂತ ಗಾಡಿಮಾದೇವನಿಗೆ ಅದೇನಗುತ್ತಿದೆಯೆಂದು ತಿಳಿಯುವುದಕ್ಕಿಂತ ಮೊದಲು ಗಾಡಿ ರಸ್ತೆಯಲ್ಲಿ ಅಡ್ಡನಿಂತುಬಿಡುತ್ತಿತ್ತು. ಅವನ ಅದ್ಯಾವ ಸನ್ನೆಯೂ ಎತ್ತು ಅರಿಯದ ಸ್ಥಿತಿಯಲ್ಲಿ ಗಾಡಿ ಹಿಂದಕ್ಕೂ ಬರದೇ-ಮುಂದಕ್ಕೂ ಚಲಿಸದೇ ಯೆಡವಟ್ಟಾಗಿಬಿಡುತ್ತಿತ್ತು. ಅದೆಷ್ಟೇ ಪ್ರಯತ್ನಪಟ್ಟರೂ ಗಾಡಿ ಹಿಂದಕ್ಕೆ ಚಲಿಸಿ ಸರಿದಾರಿ ಹಿಡಿಯುತ್ತಿರಲಿಲ್ಲ. ಹೀಗೆ ಆದಾಗ ಗಾಡಿ ಘಟಾರದತ್ತ ಮುಖಾಮಾಡುತ್ತ ಸರಿದಾಗ – ಮಾದೇವ ಅದೇನಾಯಿತು ಎಂದು ತಿಳಿಯುವುದರೊಳಗೆ ಗಾಬರಿಯಾಗಿ ಆ ಹುಡುಗರತ್ತ “ಹೋ….!!” ಎಂದು ಕೂಗುವುದು ಆ ಎತ್ತುಗಳನ್ನು ಇನ್ನಷ್ಟು ಗಾಬರಿಯಾಗಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿಬಿಡುತ್ತಿತ್ತು. ಒಮ್ಮೊಮ್ಮೆ ಹೀಗೆ ಆದಾಗ ಗಾಡಿಯಿಂದ ಇಳಿದು ಎತ್ತನ್ನು ಬಿಚ್ಚಿ , ನೊಗ ಹಿಡಿದು ಗಾಡಿಯನ್ನು ಸರಿಯಾದ ದಾರಿಗೆ ಸ್ವತಃ ಎಳೆದು ತಂದು ಮತ್ತೆ ಗಾಡಿಗೆ ಎತ್ತನ್ನು ಕಟ್ಟಿ ಮುಂದೆ ಹೋಗುವಾಗ ಸುಮಾರು ಅರ್ಧಗಂಟೆಯೇ ಬೇಕಾಗುತ್ತಿತ್ತು. ಅದಕ್ಕೇ ಇವತ್ತು ಮಕ್ಕಳನ್ನು ಕಂಡಾಗಲೇ ಅವರಿಗೆ ವಾರ್ನಿಂಗನ್ನು ಕೊಟ್ಟಿದ್ದ. ಆದರೂ ಮಕ್ಕಳನ್ನು ಅದ್ಯಾಕೋ ಗದರಿಸುತ್ತಿರಲಿಲ್ಲ. ತನಗೆ ಮತ್ತು ನಿಂಗಿಗೆ ಮಕ್ಕಳಾಗಲಿಲ್ಲವೆಂಬ ಕಾರಣದಿಂದಲೋ ಅಥವಾ ಈ ಮಕ್ಕಳೆಲ್ಲ ಬ್ರಾಹ್ಮರ ಮಕ್ಕಳೆಂದೋ.. ಗಾಡಿಮಾದೇವನಿಗೆ ನಿಂಗಿಗೆ ಮದುವೆ ಆಗಿ ಅದಾಗಲೇ ಸುಮಾರು ೧೨-೧೫ ವರ್ಷವಾಗಿಬಿಟ್ಟಿತ್ತು. ಎಷ್ಟೇ ಕಷ್ಟಪಟ್ಟರೂ ಮಕ್ಕಳಾಗಿರಲಿಲ್ಲ ಆದರೆ ಗಾಡಿಮಾದೇವನಿಗೆ ಅದು ತನ್ನ ದೋಷದಿಂದ ಅಲ್ಲ – ನಿಂಗಿಯಲ್ಲಿರುವ ಕೊರತೆಯಿಂದ ಎಂದು ತಿಳಿದುಬಿಟ್ಟದ್ದು ನಿಜ. ಅದಕ್ಕೆ ಕಾರಣವೂ ಇತ್ತು.

ಯವುದೇ ಅಲಾರಮ್ ಇಲ್ಲದೇ – ಘಂಟೆಯ ಪರಿವೆ ಇಲ್ಲದೇ ಬದುಕುತ್ತಿದ್ದ ಈಶ್ವರ ಕತ್ತಲೆಯ ಬೆಳಿಗ್ಗೆಯಲ್ಲಿ ಎದ್ದು ಚುಮ್ಮಣಿ ಬುರ್ಡೆ ಹಚ್ಚಲು ತನ್ನ ಕವಳದ ಚಂಚಿಯನ್ನು ತದಕಾಡಿದ. ಬೀಡಿ ಮಾತ್ರ ಕೈಗೆ ಸಿಕ್ಕುತ್ತಿತ್ತೆ ವಿನಹ ಬೆಂಕಿಪೆಟ್ಟಿಗೆ ಸಿಗದೇ ಅಡಿಕೆ ಮತ್ತು ಸುಣ್ಣದ ಡಬ್ಬಿಯೇ ಸಿಗುತ್ತಿತ್ತು. ಅದೆಷ್ಟೇ ಹುಡುಕಿದರೂ ಬೆಂಕಿಪೆಟ್ಟಿಗೆ ಸಿಗದೇ, ಆ ಕವಳದ ಚಂಚಿಯೆಂಬ ಚಿಕ್ಕ ಜಗತ್ತಿನಲ್ಲಿ ತನ್ನನ್ನೇ ಕಳೆದುಕೊಂಡಂತೆ ತಡಕಾಡಿದ. ನಿನ್ನೆ ಹಾಕಿದ ಸಾರಾಯಿಯ ವಾಸನೆಯನ್ನು ಹೋಗಲಾಡಿಸಲು ಕವಳದ ಅವಷ್ಯಕತೆಯಿತ್ತೆ ವಿನಹ ನಿಜವಾಗಿ ಬೆಳಕಿನ ಅವಷ್ಯಕತೆ ಆ ಕ್ಷಣದಲ್ಲಿ ಈಶ್ವರನಿಗೆ ಇರಲಿಲ್ಲ. ಕತ್ತಲೆಯಲ್ಲಿ ಕವಳ ಹಾಕಲು ಸ್ವಲ್ಪ ಅಂಜಿಕೆ – ಮೊನ್ನೆಯಷ್ಟೆ ಒಂದು ಪರಾಮಶಿ ಆಗಿತ್ತು. ರಾತ್ರಿ ಸುಸ್ತಾಗಿ ಬಂದ ಈಶ್ವರ ಉಟ ಮಾಡಿ ಮಲಗಲು ಹೋಗುವ ಮುನ್ನ ಒಂದು ಎಲೆಅಡಿಕೆ ಅಗಿದು-ಉಗಿದು ಮಲಗುವ ಅಭ್ಯಾಸ. ಹಾಗೆಂದು ಅದೇ ಆ ದಿನದ ಕೊನೆಯ ಎಲೆಅಡಿಕೆ ಯೆಂದೇನು ಅಲ್ಲ. ಪಾತ್ರೆಯನ್ನು ತೊಳೆಯುವ ಸದ್ದು – ಆ ಕ್ಷಣ ಈಶ್ವರನಿಗೆ ಸದಾ ರೋಮಾಂಚನದ ಸಮಯ. ನಾಗಮ್ಮನ ಆಗಮನಕ್ಕೆ ಕಾಯುವ ಆ ಕ್ಷಣ ಇಡೀ ದಿನ ಕಾದಂತೆ. ಆದರೆ ಮೊನ್ನೆ ಈಶ್ವರನಿಗೆ ಅದ್ಯಾವುದೇ ಸರಸಕ್ಕೂ ಮನಸ್ಸಾಗದಷ್ಟು ದೇಹ ದಣಿದಿತ್ತು. ದಿನಂಪ್ರತಿಯಂತೆ ನಾಗಮ್ಮ ಈಶ್ವರನ ಪಕ್ಕದಲ್ಲಿ ಬಂದು ಮಲುಗುವಾಗ ಕುತ್ತಿಗೆಯಲ್ಲಿ ನೇತುಬಿಟ್ಟ ಹಲವು ಸರಗಳು ಈಶ್ವರನನ್ನು ಕರೆದಂತೆ ಭಾಸವಾಗಿ “ಅಮ್..” ಎಂದ. ತನ್ನೆಲ್ಲ ಸಾಕು-ಸುಸ್ತುಗಳನ್ನು ಸಂಭೋಗ ಹೆಚ್ಚುಮಾಡುತ್ತದೆಯೋ ಅಥವಾ ಕಡಿಮೆಮಾಡುತ್ತದೆಯೋ ಎಂದು ಅರಿಯದೇ ಅವಳನ್ನು ಸಂಭೋಗಿಸಿ ಎದ್ದು ಹೆಗಡೇರು ಕೊಟ್ಟ ಅರಾಮ ಖುರ್ಚಿಯಲ್ಲಿ ಕೂತ. ಅವಳ ಬಟ್ಟೆ ಎಳೆದುಕೊಳ್ಳುವ ಸದ್ದು. ಬಾಯಾರಿಕೆ ಆದಂತಾಗಿ ಕವಳದ ಚಂಚಿಯನ್ನು ಎತ್ತಿಕೊಂಡ ಕತ್ತಲೆಯಲ್ಲೇ. ದೂರದ ರಸ್ತೆಯ ಬೆಳಕು ಕ್ಷೀಣವಾಗಿ ಮನೆಯನ್ನು ಹೊಕ್ಕು ಎಲ್ಲವನ್ನೂ-ಈಶ್ವರನನ್ನು ಭೇದಿಸುತ್ತಿತ್ತು. ಸ್ವಲ್ಪ ಕ್ಷಣದ ಮೊದಲು ಇದೇ ಬೆಳಕನ್ನು ಇಷ್ಟಪಡದ ಈಶ್ವರ ಈಗ ವೀಳ್ಯದ ಎಲೆಯನ್ನು ಹಿಡಿದು ಬೆಳಕಿನತ್ತ ವಾಲಿದ. ಹಿತ್ತಲಲ್ಲೆಲ್ಲೋ ಕೋಳಿ ಓಡಿದ ಸದ್ದು ಕೇಳಿ ಮನಸ್ಸು ಅಲ್ಲಿ ಹೋಯಿತು. ಬಚ್ಚಲಲ್ಲಿ ನೀರುಹಾಕಿದಂತೆ ಸಪ್ಪಳ. ಅತ್ತಿಗೆ ಎದ್ದಿರಬಹುದೇ ಅಂದುಕೊಂಡು ಬೆಳಕಿನಿಂದ ಹಿಂದೆ ಸರಿದ. ಇಲ್ಲ ಅತ್ತಿಗೆ ಅಲ್ಲವೇ ಅಲ್ಲ. ನಾಗಮ್ಮನೇ.. ಹೌದು ಇಷ್ಟೊತ್ತು ಇಲ್ಲೇ ತಾನು ಹರಡಿದ ಬಟ್ಟೆಗಳನ್ನೆಲ್ಲ ಸರಿಮಾಡಿಕೊಳ್ಳುತ್ತಿದ್ದವಳು ಅದ್ಯಾವಾಗ ಬಚ್ಚಲಿಗೆ ಹೋದಳು.. ಈ ಮಧ್ಯೆ ವೀಳ್ಯದೆಲೆಗೆ ಕತ್ತಲೆಯಲ್ಲೇ ಸುಣ್ಣ ಸವರಿ ಅಡಿಕೆ ಬಾಯಿಗೆ ಒಗೆದುಕೊಂಡು ಅಗಿಯಲು ಶುರುಮಾಡಿದ. ನಾಗಮ್ಮ ವಾಪಸ್ಸು ಬಂದು “ಅ:ಮ್…” ಎಂದು ಚಾದರವನ್ನೆಳೆದುಕೊಂಡಳು ; ಸಾಕು ಮಲಗು ಎಂದಂತೆ ಈಶ್ವರನಿಗೆ ಅಂದಂತೆ ಅನಿಸಿದ್ದು ಖರೆ. ಒಮ್ಮೆಲೇ ಬಾಯಲ್ಲಿ ಬೆಂಕಿಹಾಕಿದಂತೆ – ಅರೆ ಉರಿ– ಸುಡುತ್ತಿದೆ.ಈಶ್ವರ ಥಟ್ಟನೆ ದಡಬಡಾಯಿಸಿ ಬಚ್ಚಲಿಗೆ ಓಡುವಾಗ ನಾಗಮ್ಮನಿಗೆ ಕಾಲು ತಾಗಿತು – ತಡಸಿ ಬಿದ್ದಂತಾದ. “ಯೆಂಥಾ…” ನಾಗಮ್ಮ ಅಂದರೂ ಗ್ರಹಿಸದೇ ಮಾತಾಡದೇ ಓಡಿದ್ದನ್ನು ಕಂಡು ನಾಗಮ್ಮನಿಗೆ ಗಾಬರಿಯಾಯಿತು. ಬಚ್ಚಲವರೆಗೆ ಹಿಂಬಾಲಿಸಿದಳು. ನಾಗಮ್ಮನಿಗೆ ಪರಿಸ್ಥಿತಿ ಅರ್ಥವಾಗಿ ಕಿಸಕ್ಕನೆ ನಕ್ಕು ಬಂದು ಚಾದರವೆಳೆದುಕೊಂಡಳು. ಸುಣ್ಣ ಜಾಸ್ತಿಯಾಗಿದ್ದರಿಂದ ನಾಲಿಗೆಯೆಲ್ಲ ಉರಿಯುತ್ತಿತ್ತು. ಈಶ್ವರ ’ಹುಸ್ಸ್.. ಹುಸ್ಸ್.. ” ಎಂದು ಗಾಳಿಯನ್ನು ಬಾಯೊಳಗೆ ಎಳೆದುಕೊಳ್ಳುತ್ತ ನಾಲಿಗೆಯ ಸುಟ್ಟ ಭಾಗಕ್ಕೆ ಅದನ್ನು ಹಾಯಿಸಿಕೊಳ್ಳುತ್ತ ಮಲಗಿದ. ಆ ಕ್ಷಣದಲ್ಲಿ ಇನ್ನು ಮುಂದೆ ಕತ್ತಲೆಯಲ್ಲಿ ಮಾಡುವುದೊಂದನ್ನು ಬಿಟ್ಟು ಇನ್ನೇನೂ ಮಾಡಬಾರದೆಂದುಕೊಂಡ. ಮತ್ತೆ ಮೂರು ದಿನ ಅದೇನನ್ನೇ ತಿಂದರೂ ಹೊಯಿಗೆ ಅಗೆದಂತೆ ಭಾಸವಾಗುತ್ತಿತ್ತು. ಅದಕ್ಕೇ ಇವತ್ತು ಬೆಳಕಿಲ್ಲದೇ ಕವಳವೇ ಬೇಡವೆಂದು – ಬೇಕಾದದ್ದು ಸಿಕ್ಕಿದರೂ ಬೇಕಾದದ್ದನ್ನು ಪಡೆಯಲು ಬೇಡದ್ದನ್ನು ತಡಕಾಡಿದ. ಥಟ್ಟನೆ ನೆನಪಾಯಿತು. ಸಿಕ್ಕಿ ಗೀರಿ ಕವಳ ಹಾಕಿ ಬಯಲಕಡೆ ಚಂಬು ಹಿಡಕೊಂಡು ಸರಿದು ಹೋದ. ಅದಿನ್ನೂ ಬೆಳಕು ಬಳಗಿರಲಿಲ್ಲ. ಗದ್ದೆಯ ಅಂಚಿನಲ್ಲಿ ಸರಿಯುವಾಗ ಇಬ್ಬನಿಯ ಹನಿಗಳು ಕಾಲ್ಮೊಡದ ವರೆಗೆ ಒದ್ದೆ ಮಾಡಿತು. ಹುಲ್ಲಿನ ತುಂಡುಗಳು ಕಾಲಿಗೆ ಅಂಟಿಕೊಂಡವು. ಮನೆಗೆ ಬಂದು ಕತ್ತಿ ಕೊಕ್ಕೆ ಕಟ್ಟಿಕೊಂಡು ಕತ್ತಲನ್ನು ಬೆಳಕು ಭೇದಿಸುವ ಲಯದಲ್ಲೇ ಬೆಟ್ಟ ಹೊಕ್ಕುತ್ತ ಹೋದ.

“ಕೂಹೂ….. ಖೂಹೂ…” ಕೋಗನ್ನು ಕೇಳಿ ಗಾಡಿಮಾದೇವ ದೂರದಿಂದಲೇ ಇದು ಈಶ್ವರನದೇ ಎಂದು ಗೊತ್ತಾಗಿ ಹೋಯಿತು. ಆತಂಕಗೊಂಡ. ನಾನು ಮರು ’ಕೂ..’ ಹಾಕದೇ ಬಾಯನ್ನು ಮುಚ್ಚುವ ಅಸಾಮಿ ಈಶ್ವರನಲ್ಲವೆಂದು ಗಾಡಿಮಾದೇವನೂ ಕೂಹೂ.. ಹಾಕಿದ. ಪಕ್ಕದಲ್ಲೇ ’ಸರಪರ್ರ್…’ ಎಂದು ಅದ್ಯಾವುದೋ ಹಕ್ಕಿ ತೆರಗೆಲೆಗಳನ್ನು ಸರಿಸಿ ಹಾರಿಹೋಯಿತು. ಎದೆ ಧಸಕ್ಕೆಂದಿತು. ಮೊದಲೆಲ್ಲ ಗಾಡಿಮಾದೇವ ಬೆಟ್ಟದಲ್ಲಿ ಅದೆಷ್ಟೇ ಪ್ರಾಣಿಗಳನ್ನು ಕಂಡರೂ ಹೆದರದವ ಇವತ್ತು ಹೆದರಲು ಕಾರಣ ನಿನ್ನೆ ರಾತ್ರಿ ನಡೆದ ಜಗಳ. ’ಗೌಡ ಗಾರ್ಡ’ನೊಟ್ಟಿಗೆ ಸರಾಯಿ ಕುಡಿಯಲು ಶುರುವಿಟ್ಟುಕೊಂಡಾಗ ಅದೆಲ್ಲವೂ ಸರಿಯೇ ಇತ್ತು. ಆದರೆ ಯಾವಾಗ ಗೌಡಗಾರ್ಡ ನಿಂಗಿಯನ್ನು ನೋಡಿ “”ಅಹ್ಹ್..”” ಎಂದನೋ ಅದ್ಯಾಕೋ ಏನೋ ಗಾಡಿಮಾದೇವನಿಗೆ ಸರಕ್ಕನೆ ಸಿಟ್ಟು ನೆತ್ತಿಗೆ ಏರಿ ಸರಾಯಿಯ ಬಾಟಲಿಯನ್ನೇ ಅವನತಲೆಗೆ ಬಡಿದುಬಿಟ್ಟ. ಜಗಳ ತಾರಕಕ್ಕೆ ಏರಿ – ಗೌಡಗಾರ್ಡ – “ಬೋಳಿಮಗ್ನೆ ಗಾಡಿಮಾದೇವಾ.. ನಾಳೆಯಿಂದ ಅದೇಃಗೆ ನೀನು ಕಳ್ಳ ನಾಟು ಸಗ್ಸ್ತೀಯಾ ನಾನೂ ನೊಡ್ಕ್ಂತೆ. ಬೆಟ್ಟದ ಬದಿಗೆ ಕಾಲಿಡು, ಗೋರ್ಮ್ಂಟ್ನೋರು ಕಾಡ್ತೂಸ್ ಕೊಟ್ಟರೆ. ಕೊಂದ್ ಹಾಕ್ಬಿಡ್ತೀನಿ ಬೊಸುಡಿಕೆ ನಿನ್ನ..” ಎಂದು ತನ್ನ ಟೆಂಟಿನತ್ತ ಓಡಿಹೋದ. ದೋರದಲ್ಲಿ ನಿಂತು ’ಬಾ ಬೇವರ್ಸಿ ಬೆಟ್ಟಕ್ಕೆ – ನಾಳೆ ಬೆಳಿಗ್ಗೆ ಕಾಲಿಟ್ಟ್ ಕೂಡ್ಲೆ ನಿನ್ನ ಹೆಣ ಮಾಡ್ಬೆ ಹೋದ್ರೆ ಗೌಡಗಾರ್ಡನೇ ಅಲ್ಲ ನಾನು..”. ಇದೆಲ್ಲ ನಿನ್ನೆ ರಾತ್ರಿ ಆದ ಮೇಲೆ ಇವತ್ತು ಗಾಡಿಮಾದೇವನ ಪ್ರತಿಯೊಂದು ಹೆಜ್ಜೆಯ ತನ್ನ ಸಾವಿನತ್ತ ಒಯ್ಯುವ ಹೆಜ್ಜೆಯಂತೆ ಭಾಸವಾಗುತ್ತಿತ್ತು. ಒಂದೈದಾರು ದಿನದ ಮುಂಚೆ ಗೌಡ ಗಾರ್ಡ ಗೌರ್ಮೆಂಟೋರು ತನಗಾಗಿ ಕಳಿಸಲಿರುವ ಕಾಡತೂಸಿನ ವರ್ಣನೆ ಮಾಡುತ್ತಿದ್ದ. ಒಂದು ಗುಂಡು ಹೊಡೆದ ಕೂಡಲೆ ಕಮಾನು ಛತ್ರಿ ಬಿಚ್ಚುವಂತೆ ಬಿಚ್ಚಿ ಹರಡುತ್ತದೆ ಮದ್ದು ಗುಂಡು. ಯಾವುದೇ ಮಿಕ ಕಾಡತೂಸಿನಿಂದ ತಪ್ಪಿಸಿಕೊಂಡುಹೋಗುವ ಹಾಗೆಯೇ ಇಲ್ಲ. ಒಮ್ಮೆ ಅದು ನನ್ನ ಕೈ ಸೇರಿದರೆ … ಇತ್ಯಾದಿ ಇತ್ಯಾದಿ…” ಗಾಡಿಮಾದೇವ ಒಳಗೊಳಗೇ ಖುಷಿ ಪಟ್ಟಿದ್ದ. ಒಮ್ಮೆ ಕಾಡ್ತೂಸ್ ಬಂದರೆ ನಾನು ಅಧೆ:ಗಾದರೂ ಗೌಡ್ಗಾರ್ಡನನ್ನು ಪುಸಲಾಯಿಸಿ ಒಪ್ಪಿಸಿ ಒಮ್ಮೆ ಅದನ್ನು ಶಿಕಾರಿಗೆ ಒಯ್ಯಬಹುದು ಎಂದು ದ್ರಢವಾಗಿ ನಂಬಿದ್ದ. ಆದರೆ ಆ ದಿನ ಗೌಡ್ಗಾರ್ಡ್ ಕಾಡ್ತೂಸು ಬರಲು ಇನ್ನು ಕನಿಷ್ಟ ಒಂದು ತಿಂಗಳು ಕಾಯಬೇಕೆಂದು ಅಂದಿದ್ದು ನೆನಪು, ಆದರೆ ಅದು ಆಗಿ ನಿನ್ನೆ ರಾತ್ರಿಗೆ ನಾಲ್ಕು ರಾತ್ರಿ ಕಳೆದಿರಬಹುದು. ಆದರೆ ನಿನ್ನೆ ರಾತ್ರಿ – ನಾಳೆ ಬೆಳಿಗ್ಗೆನೇ ತನ್ನನ್ನು ಕಾಡ್ತೂಸಲ್ಲಿ ಕೊಲ್ಲುತ್ತೇನೆ ಎಂದದ್ದು ಇದನ್ನು ನಂಬಬೇಕೋ ಬೇಡವೂ – ಎಂದು ತಿಳಿಯದಾದ. ಆದರೆ ಪ್ರತಿಯೋದು ಹೆಜ್ಜೆಯೂ ಹುಷಾರಾಗಿರಬೇಕು ಎಂದು ತನಗೆ ತಾನೇ ಹೇಳಿಕೊಂಡ. ಮತ್ತೆ ಸ್ವಲ್ಪ ಹೊತ್ತಿಗೆ ಮತ್ತೆ ಈಶ್ವರ ಮತ್ತೊಮ್ಮೆ “ಕೂಹೂ..” ಹಾಕಿದ್ದನ್ನು ಕಂಡು ಅಸಹನೆ ಮೀರಿತು. ಆದರೆ ತಾನು ಕೂಗುವಂತಿಲ್ಲ. ಕೂಗಿದರೆ ಮತ್ತೆ ಗೌಡ್ಗಾರ್ಡ್ ಇಲ್ಲೇ ಎಲ್ಲೋ ಇದ್ದರೆ ಸುಲಭವಾಗಿ ತನ್ನನ್ನು ಹುಡುಕಿ ಗುಂಡುಹಾರಿಸಿದರೆ !.. “ಓಡಿ ಹೋಗಿ ಆ ಈಶ್ವರನ ಸಾಮಾನಿನ ಮೇಲೆ ಒದ್ದು ಬಿಡ್ತೆ ಈಗ” ಸಡನ್ನನ್ನೆ ಈ ಮಾತು ತಾನು ಗಟ್ಟಿಯಾಗಿಯೇ ಆಡಿದನೇ ಅಥವಾ ಮನಸ್ಸಿನಲ್ಲೇ ಅಂದುಕೊಂಡದ್ದೋ ತಿಳಿಯದೆ ಒಮ್ಮೆಲೇ ನಿಂತು ಉಸಿರು ಬಿಟ್ಟ. ಹಿಂದಕ್ಕೆ ಯಾರೂ ಸರಿದಂತಾಯಿತು.ಥಟ್ಟನೆ ನಿಂಗಿ ನೆನಪಾದಳು. ನಿಂಗಿ ಬೆಳಿಗ್ಗೆ ನಸುಗತ್ತಲೆಯಲ್ಲಿ ಹೊರಟು ಬರುವಾಗಲೇ ಅಪಶಕುನ ಆಡಿದ್ದು ನೆನಪಯ್ತು. “ಹಡಬೆ..”. ಹೀಗೆಲ್ಲದರ ಮಧ್ಯೆ ಅದೇನೋ ಇತ್ತಲೇ ತನ್ನತ್ತಲೇ ಬರುತ್ತಿರುವಂತೆ. ಅದೇನು ಯಾವ ಜಾತಿಯ ಆಕೃತಿ ಎಂದು ಅಂದಾಜೇ ಹತ್ತಲಿಲ್ಲ. ಅದು ತನ್ನತ್ತವೇ ಬರುತ್ತಿದೆಯೋ ಅಥವಾ ತನ್ನಿಂದ ದೂರ ಓಡುತ್ತಿದೆಯೋ ಗ್ರಹಿಸದಾದ. ಹೌದು ಅದು ಮನುಷ್ಯಜಾತಿಯೇ ಇರಬಹುದೇನೋ.. ಹೌದು ಹತ್ತಿರ ಬಂದಂತೆ ಕ್ಷಣವೊಂದರಲ್ಲಿ ಸ್ಪಷ್ಟ ಅಸ್ಪಷ್ಟ. ಗಾಡಿ ಮಾದೇವನಿಗೆ ಆ ಕ್ಷಣದಲ್ಲಿ “ಯಾರದು..!” ಎಂದು ಕೇಳಲು ಬಾಯಿತೆಗೆದರೂ ಮಾತೇ ಬರಲೇ ಇಲ್ಲ. ಗೌಡಗಾರ್ಡನಂತು ಅಲ್ಲ. ಅವ ಆದರೆ ಕಾಡ್ತೂಸಿರುವಾಗ ಆತನೇ ಯಾಕೆ ಓಡಿಬಂದಾನು. ಆ ಜೀವಕ್ಕೆ ತಾನು ಇಲ್ಲಿ ನಿಂತದ್ದು ಕಾಣಿಸಿದೆಯೋ ಇಲ್ಲವೋ ಎಂದೆಲ್ಲ ಅಂದುಕೊಳ್ಳುತ್ತಿರುವಾಗಲೇ ಅವನಿಗೆ ಆ ಜೀವಿ ಬಂದು ಡಿಕ್ಕಿ ಹೊಡೆದು ಗಾಡಿಮಾದೇವ ಪಕ್ಕಕ್ಕೆ ವಾಲಿ ಆಯ ತಪ್ಪಿ ಎಡಕ್ಕಿದ್ದ ಇಳಿಜಾರಿಗೆ ಬಿದ್ದ. ಡಿಕ್ಕಿ ಹೊಡೆಯುವಾಗ ಆ ಜೀವ ಮನುಷ್ಯನಂತೆ “ಹ್ರಾ..” ಎಂದದ್ದು ಭಾಸವಾದಂತೆ. ಕ್ಷಣವೊಂದರಲ್ಲಿ ಅದೇನು ಆಗಿದೆಯೆಂಬುದನ್ನೇ ತಿಳಿಯದಾಗಿ ಗಾಡಿಮಾದೇವ ಇಳಿಜಾರಿನಲ್ಲಿ ಸುಮಾರು ದೂರ ತೆರಗೆಲೆಗಳ ಮಧ್ಯೆ ಜಾರಿ ಹೋಗಿ ಬಿದ್ದ. ಮಯ್ಯೆಲ್ಲ ಬೆಂಕಿ ಹಚ್ಚಿದಂತೆ ಉರಿ ಉರಿ. ತೆರಗೆಲೆಗಳ ಮಧ್ಯೆಯಿದ್ದ ಎಲ್ಲ ಮುಳ್ಳುಗಳೂ .. ಅದೇನು ಆಗಿದೆಯೆಂದು ಅರ್ಥವೇ ಆಗದೇ “ಅಬ್ಬಾ..” ಎಂದ. ಅದೇ ಕ್ಷಣದಲ್ಲಿ ಅದ್ಯಾರೋ ಇನ್ನೊಬ್ಬ “ಅಬ್ಬಾ” ಎಂದಂತೆ. ಅಲುಗಾಡಲೂ ಹೆದರಿಕೆ. ಅದೇನು ಜೀವಿಯೆಂಬುದೇ ಗೊತ್ತಿಲ್ಲ. ಅದೂ ಡಿಕ್ಕಿಯಾದ ಹೊಡೆತಕ್ಕೆ ನನ್ನೊಟ್ಟಿಗೇ ಬಂದು ಬಿದ್ದಿರಲೂ ಬಹುದು. ಆದರೆ ನಿಜವಾಗಿಯೂ ಆ ಜೀವಿ ಅಂದಿದ್ದು ಅಬ್ಬಾ ಎಂದಲೇ ಅಥವಾ ಇನ್ಯವುದೋ ಶಬ್ಧವೋ ಅಥವಾ ಎಲ್ಲವೂ ತನ್ನ ಭ್ರಮೆಯೋ.. ಅದ್ಯಾವುದನ್ನೂ ಅರ್ಥಮಾಡಿಕೊಳ್ಳಲು ಅವಕಾಶ ಕೊಡದೇ ಮುಳ್ಳುಗಳು ನಾಟಿಕೊಂಡ ಜಾಗಗಳು ಉರಿಯುತ್ತಿದ್ದವು. ಒಮ್ಮೆಲೇ ತಾನು ಜಗತ್ತಿನ ಇನ್ಯಾವುದದರೂ ಭಾಗದಲ್ಲಿ ಈ ಕ್ಷಣ ಇರಬಾರದಿತ್ತೆ ಅಂದುಕೊಂಡಂತೆ ಅಂದುಕೊಂಡ. ಒಂದೊಂದು ಕ್ಷಣದ ಪೂರ್ಣ ಅನುಭವವೂ ತನಗಾಗುತ್ತಿರುವಂತೆ ಭಾಸ. ಇನ್ನು ಕೆಲವೇ ಕೆಲ ಕ್ಷಣಗಳು ತನ್ನ ಜೀವನದ ಅಂತಿಮ ಕ್ಷಣಗಳಾಗಬಹುದು. ಸಣ್ಣಗೆ ಅಳು ಬಂದಂತಾಯಿತು. ಸ್ವಲ್ಪವೇ ಅಲುಗಾಡಿದರೂ ಸಾವು ಫಕ್ಕನೆ ಮೈ ಮೇಲೆ ಎರಗಬಹುದು. ಹಂದಾಡಲಿಲ್ಲ. ಯಾವುದೇ ಸಪ್ಪಳವಿಲ್ಲ. ತನ್ನ ಸುತ್ತಲ ಎಲ್ಲ ತೆರಗೆಲೆಗಳೂ ಅದೇಷ್ಟೋ ವರ್ಷದಿಂದ ಮಲಗಿ ನಿದ್ರಿಸುತ್ತಿರುವಂತೆ. ಇಲ್ಲಿಯೇ ಹೀಗೆ ಕೂತರೆ ಅದ್ಯವುದೇ ಕ್ಷಣದಲ್ಲೂ ಸಾವು ನೆಗೆದು ಹಾರಬಹುದು. ಸತ್ತೇ ಹೋಗಲಿ ಅದ್ಯಾಕಾದರೂ ಈ ಕಳ್ಳ ನಾಟಿನ ಕೆಲಸಬೇಕು ನನಗೆ ಅಂದುಕೊಳ್ಳುತ್ತಿರುವಂತೆ ಒಂದು ಬೆವರ ಹನಿ ಟಕ್ಕನೆ ಎಲೆಯೊಂದರ ಮೇಲೆ ಬಿತ್ತು. ತನ್ನ ಉಸಿರೇ ತನಗೆ ಬೇಡದಷ್ಟು. ಕಿವಿ ಕೆನ್ನೆಯ ಭಾಗವೆಲ್ಲ ಬಿಸಿ ಬಿಸಿ.. ಪೂರ್ಣ ಕತ್ತಲು. ಸರಕ್ಕನೆ ಅದೇನೋ ಚಲಿಸಿದಂತೆ. ಸರ್ರ್ರ್ರ್…… ಫಕ್ಕನೇ ಆ ಜೀವಿ ಓಡಿ ಹೋದದ್ದು ಕೇಳಿ ನರವೆಲ್ಲ ಶೀತವಾಯಿತು. ಇಲ್ಲೇ ಇರಲೋ ಅಥವಾ ಕುಟ್ಟಿ ಓಡಲೋ ಎಂದು ತಿಳಿಯದೇ ಆ ಜೀವಿ ಓಡಿದ ವಿರಿದ್ಧ ದಿಕ್ಕಿಗೆ ಬಿರುಗಾಳಿಯಂತೆ ಓಡಿದ ತನ್ನನ್ನೇ ತಾನು ಸ್ಪರ್ಧಿಸುವಂತೆ ಗಾಡಿಮಾದೇವ. ಆ ಒಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ಈಶ್ವರನನ್ನೂ ಗ್ರಹಿಸದೆ ಮತ್ತೊಂದು ಡಿಕ್ಕಿ ಹೊಡೆದು ಇಬ್ಬರು ಕಂಗಾಲಾಗಿ ಒಂದೊಂದು ಕಡೆ ಉರುಳಿದರು. ಈಶ್ವರನ ಹಲ್ಲು ಉಬ್ಬು ಗಾಡಿಮಾದೇವನ ಹಣೆಗೆ ಬಡಿದು ಆದ ಗಾಯವನ್ನು ಮುಟ್ಟುತ್ತ.. ಇಬ್ಬರು ಒಮ್ಮೆಲೆ ಅದೇನಾಗಿದೆ ಎಂದೂ ಕೇಳಿಕೊಳ್ಳದೇ ದಿಕ್ಕಾಪಾಲಾಗಿ ಊರಿನತ್ತ ಓಡಲು ಶುರುವಿಟ್ಟುಕೊಂಡರು. ಕಳ್ಳ ನಾಟಿನ ವ್ಯವಹಾರದಲ್ಲಿ ಒಬ್ಬ ಓಡಲು ಶುರುವಿಟ್ಟುಕೊಂಡರೆ ಅದ್ಯಾರೂ ’ಯಾಕೆ’ ಎಂದು ಕೇಳದೇ ಓಡಬೇಕೆಂಬುದು ಒಂದು ಅಲಿಖಿತ ನಿಯಮವಾಗಿತ್ತು. ಗಾಡಿ ಮಾದೇವ ಮನೆಯ ಬಚ್ಚಲೆಂಬ ಗೂಡನ್ನು ಹೊಕ್ಕು ಕಟ್ಟೆಯ ಮೇಲೆ ಕೂತ.. ಕಟ್ಟೆಯ ಗೋಡೆಗೆ ಹಬ್ಬುತ್ತಿದ್ದ ಬಳ್ಳಿ ವರಲೆಯ ಮಣ್ಣು ಅವನ ಕಾಲಿಗೆ ತಾಗಿ ಚರಪರನೆ ಉದುರತೊಡಗಿತು.

ಸರಕ್ಕನೆ ಬಚ್ಚಲು ಹೊಕ್ಕ ಜೀವಿ ಅಮ್ಮಕ್ಕನ ಮನೆಯ ನಾಯಿಯೇ ಇರಬೇಕೆಂದು “ಹಚ ಹಚಾ..” ಎಂದು ಹಿತ್ತಲಿಂದಲೇ ನಿಂಗಿ ಕೂಗಿದ್ದು ಕೇಳಿ ಗಾಡಿ ಮಾದೇವನ ಅಸಹನೆ ವಕ್ಕರಿಸಿ ಬಂತು. “ನಾನೆ ಬ್ಯಾವರ್ಸಿ” ಎಂದು ಕೂಗಬೇಕೆಂದುಕೊಂಡ – ಸ್ವರ ಹೊರಬರಲಿಲ್ಲ. ಇದೆಲ್ಲವೂ ನಿಂಗಿಯಿಂದಲೇ ಆಗಿದ್ದು ಅಂದುಕೊಂಡ. ಗೌಡಗಾರ್ಡ “ಅಹ್ಹ್” ಅಂದದ್ದನ್ನು ನಾನು ಅಷ್ಟೆಲ್ಲಾ ಬೆಳೆಸಬಾರದಿತ್ತೆಂದುಕೊಂಡ. ಅದಿನ್ನು ಬೆಳಕು ಹರಿದಿರಲಿಲ್ಲ. ದೂರದಲ್ಲೆಲ್ಲೋ ಬೆಟ್ಟದಲ್ಲಿ “ಢಮ್ಮ್..ಢಮಾರ್ರ್” ಎಂಬ ಶಬ್ಧ ಕೇಳಿತು. ವಿಚಿತ್ರವಾಗಿ ವಿಕಾರವಾಗಿ ಅದ್ಯಾರೋ ಕೂಗಿಕೊಂಡದ್ದು ಕೇಳಿಸಿತು. ಬಚ್ಹಲ ಹಂಡೆಗೆ ಹಚ್ಚಿದ ಬೆಂಕಿ ಹೊಗೆ ಹೊಗೆಯಾಗಿ ಗಾಡಿಮಾದೇವನನ್ನು ಸುತ್ತಿಕೊಂಡಿತು…. “ಕಾಡತೂಸು ಒಮ್ಮೆ ಅದುಮಿದರೆ ಎರಡು ಬಾರಿ ಸದ್ದು ಮಾಡುತ್ತದೆಯೇ..!” – ಕೆಮ್ಮು ಬಂತು..

Advertisements

2 thoughts on “ಕಾಡತೂಸು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s